ಪರಿಷತ್‍ನ ಸಭಾಪತಿ .ಶಂಕರ ಮೂರ್ತಿ ನಿವೃತ್ತಿ, ಹಂಗಾಮಿ ಸ್ಪೀಕರ್ ಆಯ್ಕೆಗೆ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

dh-shankara-murthy
ಬೆಂಗಳೂರು, ಜೂ.21- ವಿಧಾನ ಪರಿಷತ್‍ನ ಸಭಾಪತಿಯಾಗಿ ಸುದೀರ್ಘ ಅವಧಿ ಕೆಲಸ ಮಾಡಿದ ಡಿ.ಎಚ್.ಶಂಕರ ಮೂರ್ತಿ ಅವರು ನಿವೃತ್ತಿಯಾಗುತ್ತಿದ್ದು, ಹಂಗಾಮಿ ಸ್ಪೀಕರ್ ಆಯ್ಕೆಗೆ ಕಸರತ್ತು ನಡೆಯುತ್ತಿದೆ. ವಿಧಾನಪರಿಷತ್ ಇತಿಹಾಸದಲ್ಲಿ ಈವರೆಗೂ ಬಿ.ಬಿ.ಕಲ್ಮಣ್‍ಕರ್(7 ವರ್ಷ), ಡಿ.ಮಂಜುನಾಥ್(5 ವರ್ಷ) ಹಾಗೂ ಬಿ.ಎಲ್.ಶಂಕರ್(4 ವರ್ಷ) ಸಭಾಪತಿಯಾಗಿ ಕೆಲಸ ಮಾಡಿದ್ದಾರೆ.

ಡಿ.ಎಚ್.ಶಂಕರಮೂರ್ತಿಯವರು 8 ವರ್ಷ ಸುದೀರ್ಘ ಕೆಲಸ ನಿರ್ವಹಿಸಿ ದಾಖಲೆ ಬರೆದಿದ್ದಾರೆ. 2010 ಜು.5 ರಿಂದ 2012, ಜೂ.21ರವರೆಗೆ, 2012 ಜೂ.28 ರಿಂದ 2018ರ ಜೂ.21 ರವರೆಗೆ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಧ್ಯೆ ಎಂಟು ದಿನಗಳ ಅಂತರ ಹೊರತುಪಡಿಸಿ ನಿರಂತರವಾಗಿ 8 ವರ್ಷ ಕೆಲಸ ಮಾಡಿದ ದಾಖಲೆ ಶಂಕರಮೂರ್ತಿ ಅವರಿಗೆ ಸಲ್ಲುತ್ತದೆ.

ವಿಧಾನಸೌಧ ಹಾಗೂ ವಿಕಾಸಸೌಧ ನಡುವೆ ಧ್ಯಾನಸ್ಥ ಮಹಾತ್ಮಗಾಂಧಿ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ಕೆಲಸಗಳನ್ನು ಮಾಡಿರುವ ಶಂಕರ ಮೂರ್ತಿಯವರು ವಿಧಾನಪರಿಷತ್ ಸದಸ್ಯತ್ವದಿಂದ ನಿವೃತ್ತಿಯಾಗುತ್ತಿದ್ದು, ಸಭಾಪತಿ ಸ್ಥಾನದಿಂದಲೂ ಕೆಳಗಿಳಿಯಲಿದ್ದಾರೆ.

ಪ್ರಮುಖ ಎರಡು ಹುದ್ದೆಗಳು ಖಾಲಿ:
ಸಂವಿಧಾನದ ನಿಯಮಾವಳಿಗಳ ಅನುಸಾರ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸಭಾಧ್ಯಕ್ಷರು ಮತ್ತು ಸಭಾಪತಿ ಹುದ್ದೆಗಳು ಒಂದು ದಿನವೂ ಖಾಲಿ ಉಳಿಯುವಂತಿಲ್ಲ. ಸಭಾಪತಿ ಶಂಕರಮೂರ್ತಿಯವರು ನಾಳೆ ನಿವೃತ್ತಿಯಾಗುತ್ತಿದ್ದಾರೆ. ಅದೇ ಸಂದರ್ಭಕ್ಕೆ ಉಪಸಭಾಪತಿ ಮರಿತಿಬ್ಬೇಗೌಡ ಸದಸ್ಯತ್ವ ಅವಧಿಯೂ ಮುಗಿಯುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಮರಿತಿಬ್ಬೇ ಗೌಡರು ಸದಸ್ಯರಾಗಿ ಮರು ಆಯ್ಕೆ ಯಾಗಿದ್ದಾರೆ. ಆದರೆ ಉಪಸಭಾಪತಿಯಾಗಿ ಆಯ್ಕೆಯಾಗಲು ವಿಧಾನಪರಿಷತ್‍ನಲ್ಲಿ ಚುನಾವಣೆ ನಡೆಯಬೇಕು. ಸದ್ಯಕ್ಕೆ ಯಾವುದೇ ಅಧಿವೇಶನ ನಡೆಯದೆ ಇರುವುದರಿಂದ ಉಪಸಭಾಪತಿ ಹುದ್ದೆ ಆಯ್ಕೆಯೂ ವಿಳಂಬವಾಗುತ್ತಿದೆ. ಇದೇ ಮೊದಲ ಬಾರಿಗೆ ವಿಧಾನಪರಿಷತ್‍ನ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳು ಏಕಕಾಲಕ್ಕೆ ಖಾಲಿಯಾಗುತ್ತಿದ್ದು, ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ.

ಒಂದು ವೇಳೆ ಉಪಸಭಾಪತಿ ಹುದ್ದೆ ಅಸ್ತಿತ್ವದಲ್ಲಿ ಇದ್ದಿದ್ದರೆ ಅವರೇ ಹಂಗಾಮಿ ಸಭಾಪತಿಯಾಗಿ ಕೆಲಸ ನಿರ್ವಹಿಸುವ ಅವಕಾಶವಿತ್ತು. ಆದರೆ ಎರಡೂ ಹುದ್ದೆಗಳು ಖಾಲಿಯಾಗುತ್ತಿರುವುದರಿಂದ ಸರ್ಕಾರ ಹಂಗಾಮಿ ಸಭಾಪತಿ ಅವರ ನೇಮಕಕ್ಕೆ ರಾಜ್ಯಪಾಲರಿಗೆ ಶಿಫಾರಸು ಕಳುಹಿಸಿದೆ.

ಚಾಲ್ತಿಯಲ್ಲಿರುವ ಸಂಪ್ರದಾಯ ಪ್ರಕಾರ ಹಿರಿಯರನ್ನು ಹಂಗಾಮಿ ಸಭಾಪತಿ ಹುದ್ದೆಗೆ ನೇಮಿಸಬೇಕು. ಹಾಗೆ ನೋಡಿದರೆ ವಿಧಾನ ಪರಿಷತ್‍ನಲ್ಲಿ ಅತ್ಯಂತ ಹಿರಿಯರಾದ ಜೆಡಿಎಸ್‍ನ ಬಸವರಾಜಹೊರಟಿ, ಕಾಂಗ್ರೆಸ್‍ನ ಪ್ರತಾಪ್‍ಚಂದ್ರಶೆಟ್ಟಿ, ಕೆ.ಸಿ. ಕೊಂಡಯ್ಯ, ಮರಿತಿಬ್ಬೇಗೌಡ, ಎಸ್.ಆರ್.ಪಾಟೀಲ್, ಬಿಜೆಪಿಯ ಕೆ.ಬಿ.ಶಾಣಪ್ಪ, ಕೋಟಾ ಶ್ರೀನಿವಾಸಪೂಜಾರಿ ಮತ್ತಿತರರಿದ್ದಾರೆ.

ಆದರೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹೊರಟ್ಟಿ ಮತ್ತು ಎಸ್.ಆರ್.ಪಾಟೀಲ್ ಅವರುಗಳು ಸಭಾಪತಿಯಾಗಲು ನಿರಾಕರಿಸುತ್ತಿದ್ದಾರೆ. ಹಂಗಾಮಿ ಸಭಾಪತಿ ನೇಮಕ ರಾಜ್ಯಪಾಲರ ವಿವೇಚನೆಗೆ ಸೇರಿದ್ದಾಗಿದೆ. ವಿಧಾನಪರಿಷತ್ ಸಚಿವಾಲಯದಿಂದ ಸೋಮವಾರವೇ ಪರಿಷತ್ತಿನ 69 ಮಂದಿ ಹೆಸರು, ವಿವರಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ನಿಯಮಾವಳಿಗಳ ವಿವರಣೆ ನೀಡಲಾಗಿದೆ.
ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಯಾರನ್ನು ಬೇಕಾದರೂ ಹಂಗಾಮಿ ಸಭಾಪತಿಯನ್ನಾಗಿ ನೇಮಿಸಬಹುದು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ಶತಾಯಗತಾಯ ಇಂದು ಸಂಜೆಯೊಳಗಾಗಿ ಹಂಗಾಮಿ ಸಭಾಪತಿ ಆಯ್ಕೆ ಪೂರ್ಣಗೊಂಡು ನಾಳೆ ನೇಮಕಾತಿ ಆದೇಶ ಹೊರಬೀಳಬೇಕು. ಇಲ್ಲವಾದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ.

ಪಕ್ಷಗಳ ಬಲಾಬಲ:

ರಾಜ್ಯಪಾಲರು ನಾಳೆ ಹಂಗಾಮಿ ಸ್ಪೀಕರ್ ನೇಮಿಸಿದರೆ ಮುಂದಿನ ವಿಧಾನಪರಿಷತ್ ಕಲಾಪ ನಡೆದು ಸಭಾಪತಿ ಆಯ್ಕೆಗೆ ಚುನಾವಣೆ ನಡೆಯುವವರೆಗೂ ಹಂಗಾಮಿ ಸಭಾಪತಿ ಕೆಲಸ ಮಾಡುತ್ತಾರೆ. ಸದ್ಯದ ಪರಿಸ್ಥಿತಿ ಪರಿಷತ್‍ನಲ್ಲಿ ಐದು ಸ್ಥಾನಗಳು ಖಾಲಿ ಇದ್ದು, 70 ಮಂದಿ ಸದಸ್ಯರಿ ದ್ದಾರೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿ ಸಿದ್ದ ಡಾ.ಜಿ.ಪರಮೇಶ್ವರ್, ವಿ.ಸೋಮಣ್ಣ, ಈಶ್ವರಪ್ಪ, ಸೋಮಣ್ಣ ಬೇವಿನ ಮರದ್, ಬಸನಗೌಡ ಪಾಟೀಲ್ ಯತ್ನಾಳ್ ಈ ಐದು ಮಂದಿ ರಾಜೀನಾಮೆಯಿಂದ ಆ ಸ್ಥಾನಗಳು ಖಾಲಿ ಉಳಿದಿವೆ.

ಉಳಿದಂತೆ 70 ಸದಸ್ಯರ ಪೈಕಿ ಕಾಂಗ್ರೆಸ್ 34, ಬಿಜೆಪಿ 20, ಜೆಡಿಎಸ್ 14 ಹಾಗೂ ಇಬ್ಬರು ಪಕ್ಷೇತರರ ಸಂಖ್ಯಾಬಲ ಇದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ವಿಧಾನಪರಿಷತ್‍ನ ಸಭಾಪತಿ, ಉಪಸಭಾಪತಿ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯುವ ಸಾಧ್ಯತೆ ಇದ್ದು, ಆಡಳಿತ ಪಕ್ಷಕ್ಕೆ ಹುದ್ದೆಗಳು ದಕ್ಕುವ ಅವಕಾಶ ಇದೆ. ಈ ನಡುವೆ ರಾಜಭವನದಿಂದ ಹಂಗಾಮಿ ಸ್ಪೀಕರ್ ಆಗಿ ಯಾರ ಹೆಸರು ಹೊರಬೀಳಲಿದೆ ಎಂಬ ಬಗ್ಗೆ ತೀವ್ರ ಕುತೂಹಲ ಉಂಟಾಗಿದೆ.

Facebook Comments

Sri Raghav

Admin