ಯೋಗ ನಮ್ಮ ದೇಶದ ಹೆಮ್ಮೆ : ಯಡಿಯೂರಪ್ಪ
ಬೆಂಗಳೂರು, ಜೂ.21- ಯೋಗ ಮನಸ್ಸನ್ನು ಶಕ್ತಿಯುತ ಮತ್ತು ಶಿಸ್ತುಬದ್ಧಗೊಳಿಸುತ್ತದೆ. ಪುರಾತನ ಯೋಗ ಪದ್ದತಿ ನಮ್ಮ ದೇಶದ ಹೆಮ್ಮೆ ಯಾಗಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಯೋಗ ಪ್ರದರ್ಶನ ನಂತರ ವೇದಿಕೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, .ಸ್ವಾಮಿ ವಿವೇಕಾನಂದರು ಹೇಳಿದಂತೆ ಯೋಗ ಮನಸ್ಸನ್ನು ಶಕ್ತಿಯುತ ಹಾಗೂ ಶಿಸ್ತು ಬದ್ಧಗೊಳಿಸಲಿದೆ. ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ. ಶರೀರ, ಬುದ್ಧಿ, ಮನಸ್ಸಿನ ಸಮತೋಲನ ಸಾಧಿಸುವ ಜೀವನ ವಿಧಾನ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ ಎಂದರು.
ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ. ಜೂ.21ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಇದರ ಯಶಸ್ಸು ಪ್ರಧಾನಿ ಮೋದಿಗೆ ಅವರಿಗೆ ಸಲ್ಲಬೇಕು. ಯೋಗ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ. ಪುರಾತನ ಯೋಗ ಪದ್ಧತಿ ನಮ್ಮ ದೇಶದ ಹೆಮ್ಮೆ ಎಂದರು. ಯೋಗಾಸನವು ಯೋಗ ದಿನಾಚರಣೆ ದಿನಗೆ ಮಾತ್ರ ಸೀಮಿತವಾಗಬಾರದು. ಯೋಗ ನಮ್ಮ ಬದುಕಿನ ದೈನಂದಿನ ಕ್ರಿಯೆ, ಆಚರಣೆಯ ಅವಿಭಾಜ್ಯ ಅಂಗವಾಗಬೇಕು. ಪ್ರತಿದಿನವು ಯೋಗ ದಿನವಾಗಿರಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ಸೇರಿದಂತೆ ವಿವಿಧ ಮುಖಂಡರು ರಾಜ್ಯ ಬಿಜೆಪಿ ಕಚೇರಿಯಲ್ಲಿ ನಾಲ್ಕನೇ ವಿಶ್ವ ಯೋಗ ದಿನಾಚರಣೆ ಆಚರಿಸಿದರು.ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಮಂಜುಳಾ ಸೇರಿದಂತೆ ಪಕ್ಷದ ಹಲವು ಮುಖಂಡರು, ಸದಸ್ಯರು ಭಾಗಿಯಾಗಿದ್ದರು.
ಯುವಕರು ನಾಚುವಂತೆ ಹಿರಿಯರು ಅನೇಕ ಕಷ್ಟಕರ ಯೋಗದ ಪಟ್ಟುಗಳನ್ನು ಸಲೀಸಾಗಿ ನಿಭಾಯಿಸಿ ಗಮನ ಸೆಳೆದರು. ಇನ್ನು ಕೆಲವರಿಗೆ ವಯಸ್ಸಿನ ಕಾರಣ ದೇಹ ಸಹಕರಿಸದಿದ್ದರೂ, ಅದರಲ್ಲಿಯೂ ಕಸರತ್ತು ನಡೆಸಿ ಯುವಜನರಿಗೆ ಸ್ಫೂರ್ತಿ ನೀಡಿದರು.