ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಲು ಅಖಾಡಕ್ಕಿಳಿದ ಎನ್‍ಎಸ್‍ಜಿ ಮತ್ತು ಶಾರ್ಪ್ ಶೂಟರ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

NSG
ನವದೆಹಲಿ/ಶ್ರೀನಗರ, ಜೂ.22-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ದಮನ ಕಾರ್ಯಾಚರಣೆ ಇಂದಿನಿಂದ ಮತ್ತಷ್ಟು ತೀವ್ರಗೊಂಡಿದೆ. ಭದ್ರತಾ ಪಡೆಗಳು ಮತ್ತು ಸಾರ್ವಜನಿಕರನ್ನು ಗುರಿಯಾಗಿಟ್ಟುಕೊಂಡು ಮೇರೆ ಮೀರಿರುವ ಉಗ್ರರನ್ನು ಸದೆ ಬಡಿಯಲು ಈಗಾಗಲೇ ದೆಹಲಿಯಿಂದ ಕಾಶ್ಮೀರ ತಲುಪಿರುವ ಸ್ನಿಪ್ಪರ್‍ಗಳು(ಶಾರ್ಪ್ ಶೂಟರ್‍ಗಳು), ರಾಷ್ಟ್ರೀಯ ಭದ್ರತಾ ಗಾರ್ಡ್(ಎನ್‍ಎಸ್‍ಜಿ) ಕಮ್ಯಾಂಡೋಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಧನ ಸಲಕರಣೆಗಳೊಂದಿಗೆ ಸನ್ನದ್ಧರಾಗಿದ್ದಾರೆ.

ಕಾಶ್ಮೀರ ರಾಜಧಾನಿ ಶ್ರೀನಗರದ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಶಿಬಿರ ಕಚೇರಿ ಹುಮಾಹದಲ್ಲಿ ಉಗ್ರರ ದಮನ ಕಾರ್ಯಾಚರಣೆಯ ಪೂರ್ವ ಸಿದ್ದತೆ ನಡೆದಿದೆ. ಕರ್ನಾಟಕದಲ್ಲಿ ನರಹಂತಕ ಮತ್ತು ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಮತ್ತು ಬಿಎಸ್‍ಎಫ್‍ನ ಕಾಶ್ಮೀರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್‍ಕುಮಾರ್ ಅವರನ್ನು ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಉಗ್ರರದ ದಮನ ಕಾರ್ಯಾಚರಣೆ ಮತ್ತಷ್ಟು ವೇಗ ಪಡೆದುಕೊಂಡಿದೆ.

ಭಯೋತ್ಪಾದಕರನ್ನು ಸದೆ ಬಡಿಯಲ್ಲಿ ಎರಡು ವಾರಗಳ ಹಿಂದೆಯೇ ಎನ್‍ಎಸ್‍ಜಿಯ ಹೌಸ್ ಇಂಟರ್‍ವೆನ್ಷನ್ ಟೀಮ್(ಎಚ್‍ಐಟಿ0 ಕಣಿವೆ ರಾಜ್ಯಕ್ಕೆ ತೆರಳಿದ್ದು, ಕಾರ್ಯಾಚರಣೆಗೆ ನೆರವಾಗಲಿದೆ. ಇಂದು ಅಥವಾ ನಾಳೆ ಎನ್‍ಎಸ್‍ಜಿಯ 100 ನುರಿತ ಕಮ್ಯಾಂಡೋಗಳೂ ಶ್ರೀನಗರ ತಲುಪಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರ ದಾಳಿ, ಸಾವು-ನೋವು ಮೊದಲಾದ ಹಿಂಸಾಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಒಂದು ತಿಂಗಳ ಹಿಂದೆಯೇ ಎನ್‍ಎನ್‍ಜಿ ಕಮ್ಯಾಂಡೋಗಳನ್ನು ಕಣಿವೆ ರಾಜ್ಯಕ್ಕೆ ರವಾನಿಸಿ ಉಗ್ರಗಾಮಿಗಳನ್ನು ಹತ್ತಿಕ್ಕುವ ಕಾರ್ಯಾಚರಣೆಗೆ ಅನುಮೋದನೆ ನೀಡಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಉಗ್ರರು ಮನೆ, ಸರ್ಕಾರಿ ಕಟ್ಟಡಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಿಗೆ ನುಗ್ಗಿದಾಗ ಅವರನ್ನು ಹೊರ ಹಾಕಿ ಗುಂಡಿಟ್ಟು ಕೊಲ್ಲುವುದು ಸಿಆರ್‍ಪಿಎಫ್ ಸೇರಿದಂತೆ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಯೋಧರ ಸಾವು-ನೋವು ಸಂಭವಿಸುತ್ತವೆ. ಇಂಥ ಸನ್ನಿವೇಶಗಳನ್ನು ಎನ್‍ಎಸ್‍ಜಿ ಕಮ್ಯಾಂಡೋಗಳು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸಲಿದ್ದು, ಈ ಕಾರ್ಯತತ್ಪರತೆ ಕುರಿತು ಸಿಆರ್‍ಪಿಎಫ್ ಮತ್ತು ಪೊಲೀಸರಿಗೆ ತರಬೇತಿ ನೀಡಲಿದೆ. ಕಳೆದ ವರ್ಷ ಕಟ್ಟಡಗಳ ಒಳಗೆ ಉಗ್ರರು ನುಗ್ಗಿ ನಡೆಸಿದ ವಿಧ್ವಂಸಕ ಕೃತ್ಯಗಳಿಂದಲೇ 80 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 70ಕ್ಕೂ ಹೆಚ್ಚು ಸಾರ್ವಜನಿಕರು ಸಾವಿಗೀಡಾಗಿದ್ದಾರೆ. ಈ ವರ್ಷದ ಮೊದಲ ಐದು ತಿಂಗಳಲ್ಲಿ ಉಗ್ರರ ಅಟ್ಟಹಾಸಕ್ಕೆ 30 ಯೋಧರು ಮತ್ತು ಪೊಲೀಸರು ಹಾಗೂ 35 ಜನರು ಮೃತರಾಗಿದ್ದಾರೆ.

Facebook Comments

Sri Raghav

Admin