ಶಾಸಕ ರಾಮದಾಸ್ ಮೇಲೆ ಸಮಸ್ಯೆಗಳ ಸುರಿಮಳೆ ಸುರಿಸಿದ ಸಾರ್ವಜನಿಕರು

ಈ ಸುದ್ದಿಯನ್ನು ಶೇರ್ ಮಾಡಿ

Ramadas--01

ಮೈಸೂರು,ಜೂ.22-ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು.  ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ ನೀರಿದ್ದರೂ ನಮಗೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ. ಮನಸೋಇಚ್ಛೆ ನೀರು ಬಿಡುತ್ತಾರೆ. ಎಲ್ಲ ರಸ್ತೆಗಳು ಮಣ್ಣಿನ ರಸ್ತೆಗಳಾಗಿವೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂಬಿತ್ಯಾದಿ ದೂರುಗಳನ್ನೇ ಸಾರ್ವಜನಿಕರು ಹೇಳುತ್ತಿದ್ದರೆ ಅಧಿಕಾರಿಗಳು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಮೌನ ವಹಿಸಿದ್ದು ಕಂಡುಬಂತು.

ಬೆಳಗ್ಗೆ 6 ಗಂಟೆಯ ನಂತರ ನೀರು ಸರಬರಾಜು ಮಾಡುವಂತೆ ಕೇಳಿದರೆ ನಾವು ಯಾವಾಗ ಬಿಡುತ್ತೇವೆ. ಆಗ ಹಿಡಿದಿಟ್ಟುಕೊಳ್ಳಿ ಎಂದು ಬೇಜಾವಬ್ದಾರಿ ಉತ್ತರ ನೀಡುತ್ತಾರೆ. ಮುಂಜಾನೆ 3-4 ಗಂಟೆಗೆ ನೀರು ಬಿಟ್ಟರೆ ಆಗ ಎದ್ದು ನೀರು ಹಿಡಿಯಲು ಸಾಧ್ಯವೇ ಎಂದು ಸಾರ್ವಜನಿಕರು ಶಾಸಕರ ಎದುರು ಸಮಸ್ಯೆಗಳನ್ನು ಹೇಳಿಕೊಂಡರು.

ಟ್ಯಾಂಕ್,ಸೊಂಪುವುಳ್ಳವರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇಲ್ಲದಿರುವವರು ನೀರು ಬಿಟ್ಟಾಗಲೇ ಕೆಲಸ ಮಾಡಿಕೊಳ್ಳಬೇಕು. ಸೂಕ್ತ ಸಮಯದಲ್ಲಿ ನೀರು ಬಿಡುವಂತೆ ಸ್ಥಳೀಯರು ಮನವಿ ಮಾಡಿಕೊಂಡರು. ಇನ್ನು ರಸ್ತೆ ಬಗ್ಗೆ ಗಮನಸೆಳೆದ ಸ್ಥಳೀಯರು ಎಲ್ಲ ಕಡೆ ಮಣ್ಣಿನ ರಸ್ತೆಗಳಾಗಿವೆ. ಮಕ್ಕಳು ಈ ರಸ್ತೆಯಲ್ಲಿ ಓಡಾಡಿ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ, ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ, ರಸ್ತೆಯೆಲ್ಲೆಲ್ಲ ಗುಂಡುಗಳು ಬಿದ್ದಿವೆ. ಇದನ್ನು ಸರಿಪಡಿಸುವಂತೆ ಪಾಲಿಕೆಯನ್ನು ಕೇಳಿದರೆ ಗ್ರಾಪಂ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ.

ಪಂಚಾಯ್ತಿಯವರನ್ನು ಕೇಳಿದರೆ ಪಾಲಿಕೆ ವ್ಯಾಪ್ತಿಗೆ ಬರುತ್ತದೆ ಎಂದು ಉತ್ತರಿಸಿ ಕೈ ತೊಳೆದುಕೊಳ್ಳುತ್ತಾರೆ. ಟ್ಯಾಕ್ಸ್ ಕಟ್ಟದಿದ್ದರೆ ಮನೆಗಳಿಗೆ ನೋಟಿಸ್ ಕಳುಹಿಸುತ್ತಾರೆ. ಟ್ಯಾಕ್ಸ್ ಕಟ್ಟಿದ್ದರೂ ನೀರು, ರಸ್ತೆ, ಒಳಚರಂಡಿ ಸೌಲಭ್ಯ ಸರಿಯಾಗಿ ಕಲ್ಪಿಸಿಲ್ಲ ಎಂಬಿತ್ಯಾದಿ ದೂರುಗಳ ಸುರಿಮಳೆಯನ್ನೇ ಶಾಸಕರ ಮುಂದೆ ಹರಿಸಿದರು.  ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದ್ಯತೆ ಮೇರೆಗೆ ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಒಟ್ಟಾರೆ ಶ್ರೀರಾಮಪುರದಾದ್ಯಂತ ಶಾಸಕರು ಸಂಚರಿಸಿದ ವೇಳೆ ಸ್ಥಳೀಯರು ಇಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.

Facebook Comments

Sri Raghav

Admin