ಪಂಜಾಬ್ ಮಾದರಿಯಲ್ಲಿ ರೈತರ ಸಾಲಮನ್ನಾ, ಪ್ರಮುಖ ಇಲಾಖೆಗಳ ಶೇ.25ರಷ್ಟು ಅನುದಾನ ಕಟ್

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು,ಜೂ.22-ರೈತರ ಸಾಲಮನ್ನಾ ಮಾಡುವ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನವನ್ನು ಕಡಿತಗೊಳಿಸಲಿದ್ದಾರೆ.  ಇದರ ಜೊತೆಗೆ ಪಂಜಾಬ್ ಮಾದರಿಯಲ್ಲಿ ರೈತರ ಸಾಲಮನ್ನಾವನ್ನು ಹಂತ ಹಂತವಾಗಿ ಜಾರಿ ಮಾಡುವ ಯೋಜನೆ ಘೋಷಣೆಯಾಗಲಿದ್ದು , ಶ್ರೀಮಂತ ರೈತರ ಸಾಲಮನ್ನಾಕ್ಕೆ ಕೊಕ್ಕೆ ಬೀಳಲಿದೆ.  ಕೇವಲ 6 ತಿಂಗಳ ಅವಧಿಯಲ್ಲಿ 2ನೇ ಬಜೆಟ್ ಮಂಡನೆ ಮಾಡಬೇಕಾದ ಅವರು ಜುಲೈ 5ರಂದು ಮಂಡಿಸಲು ಉದ್ದೇಶಿಸಿರುವ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡುವ ಅಂಶವೇ ಪ್ರಧಾನವಾಗಿರಲಿದೆ.

ಹೀಗಾಗಿ ಈ ಬಾರಿಯ ಬಜೆಟ್‍ನಲ್ಲಿ ಈ ಹಿಂದೆ ಪ್ರಮುಖ ಇಲಾಖೆಗಳಿಗೆ ಅಂದರೆ ಕೃಷಿ, ಸಹಕಾರ, ಜಲಸಂಪನ್ಮೂಲ, ಪ್ರಾಥಮಿಕ, ಉನ್ನತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ, ಹಿಂದುಳಿದ ವರ್ಗ,ಅಲ್ಪಸಂಖ್ಯಾತ, ವಸತಿ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಕಂದಾಯ, ಇಂಧನ,ಲೋಕೋಪಯೋಗಿ, ವಸತಿ, ಗೃಹ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅನುದಾನಕ್ಕೆ ಕೊಕ್ಕೆ ಬೀಳಲಿದೆ.  ಬಜೆಟ್‍ನಲ್ಲಿ ನಿಗದಿಪಡಿಸಿದ ಅನುದಾನ ಶೇ.50ರಿಂದ 60ರಷ್ಟು ಮಾತ್ರ ಖರ್ಚಾಗಲಿದೆ. ಉಳಿದ ಹಣ ಹಾಗೆಯೇ ಉಳಿಯುವುದರಿಂದ ಇರುವ ಸೀಮಿತ ಸಂಪನ್ಮೂಲದಲ್ಲೇ ಇತಿಮಿತಿಯೊಳಗೆ ಕೆಲಸ ಮಾಡಲು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಕುಮಾರಸ್ವಾಮಿ ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಬಜೆಟ್ ಪೂರ್ವಭಾವಿ ಸಭೆ ನಡೆಸಿರುವ ಮುಖ್ಯಮಂತ್ರಿಯವರು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಮುಖಾಮುಖಿಯಲ್ಲೇ ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಯಾವ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಿತ್ತು.  2013ರಿಂದ 2018ರವರೆಗೆ ಒಂದು ವರ್ಷಕ್ಕೆ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ. ಇದು ಎಷ್ಟು ಖರ್ಚಾಗಿದೆ. ಆಗಿರುವ ಆನುಷ್ಠಾನದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ. ತಮ್ಮ ಇಲಾಖೆಗಳಿಗೆ ಅನುದಾನವನ್ನು ಕಡಿತಗೊಳಿಸುವ ಸೂಚನೆಯನ್ನು ನೀಡಿರುವ ಮುಖ್ಯಮಂತ್ರಿಗಳು ಶೇ.75ರ ಗುರಿಯೊಂದಿಗೆ ನಿಗದಿಪಡಿಸಿದ ಅನುದಾನವನ್ನು ಕಾಲ ಮಿತಿಯೊಳಗೆ ಖರ್ಚು ಮಾಡಬೇಕಾಗುತ್ತದೆ ಎಂಬ ಷರತ್ತಿನೊಂದಿಗೆ ಅನುದಾನ ನಿಗದಿಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕಾರಣವೇನು: ವಿಧಾನಸಭೆಗೂ ಮುನ್ನ ರೈತರಿಗೆ ನೀಡಿದ ವಾಗ್ದಾನದಂತೆ ಸಾಲ ಮನ್ನಾ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಕ್ಕಾಗಿ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರವು ಪಂಜಾಬ್ ಮಾದರಿಯ ಮೋರೆ ಹೋಗಲಿದೆ. ಕಳೆದ ವರ್ಷವಷ್ಟೆ ಪಂಜಾಬ್‍ನ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡಿತ್ತು. ರಾಜ್ಯದ ಮೈತ್ರಿ ಸರ್ಕಾರ ಕೂಡ ಪಂಜಾಬ್ ಮಾದರಿಯನ್ನು ಅನುಸರಿಸಲು ಚಿಂತಿಸಿದ್ದು, ಅದೇ ಮಾದರಿಯಲ್ಲಿ ಕರಡು ರಚನೆಯನ್ನೂ ಮಾಡಿದೆ. ಪಂಜಾಬ್‍ನಲ್ಲಿ ಕಳೆದ ವರ್ಷ ಜೂ.19ರಂದು ರೈತರ ಸಾಲಮನ್ನಾದ ಅಧಿಕೃತ ಘೋಷಣೆ ಮಾಡಿದರು ಅಲ್ಲಿನ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್. ಪಂಜಾಬ್ ಸರ್ಕಾರ 3 ಹಂತಗಳಲ್ಲಿ ರೈತರ ಸಾಲ ಮನ್ನಾ ಮಾಡಿತು. ಹಂತ ಹಂತವಾಗಿ ಮಾಡಿದ ಸಾಲಮನ್ನಾ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಹಾಕಲಿಲ್ಲ. ರೈತರ ವರ್ಗೀಕರಣ ಮಾಡಿ ಸಾಲಮನ್ನಾ ರೈತರನ್ನೂ ಸಹ ಅವರ ಸಾಲ ಮತ್ತು ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವರ್ಗೀಕರಣ ಮಾಡಿ ಸಾಲಮನ್ನಾ ಮಾಡಲಾಗಿತ್ತು. ಸಣ್ಣ ಪ್ರಮಾಣದ ರೈತನ ಸಂಪೂರ್ಣ ಸಾಲ ಮನ್ನಾ ಆದರೆ ಮಧ್ಯಮದವನ ಅಸಲು ಮಾತ್ರವೇ ಮನ್ನಾ ಆಗಿತ್ತು. ಹೆಚ್ಚು ಜಮೀನು ಹೊಂದಿದ ರೈತನಿಗೆ ಬಡ್ಡಿ ಮಾತ್ರವೇ ಮನ್ನಾ ಆಗಿತ್ತು.

ಹಂತಗಳಲ್ಲಿ ಸಾಲ ಮನ್ನಾ ಆದ್ದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಲಿಲ್ಲ. ವಿರೋಧ ಪಕ್ಷ ಮಾಮೂಲಿನಂತೆ ವಿರೋಧ ವ್ಯಕ್ತಪಡಿಸಿದವಾದರೂ ರೈತರು ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರಲ್ಲದೇ ಯೋಜನೆ ಯಶಸ್ವಿಯೂ  ಆಯಿತು. ರೈತರೂ ಸಹ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದ್ದರು. ಹಾಗಾಗಿ ಸರ್ಕಾರವು ಆರ್ಥಿಕ ಹೊರೆಯಾಗದ ಪಂಜಾಬ್ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಸಮನ್ವಯ ಸಮಿತಿ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿಯೂ ಪಂಜಾಬ್ ಮಾದರಿಯಲ್ಲೇ ಸಾಲಮನ್ನಾ ಮಾಡಲು ಒಕ್ಕೂರಲ ಒಮ್ಮತ  ವ್ಯಕ್ತವಾಗಿದೆ.

ಶ್ರೀಮಂತ ರೈತರ ಸಾಲಮನ್ನಾ ಇಲ್ಲ
ರೈತರ ಸಾಲ ಮನ್ನಾ ಎಂದ ಕೂಡಲೇ ಎಕರೆಗಟ್ಟಲೆ ಜಮೀನು ಹೊಂದಿರುವ, ಭಾರಿ ಕಾರು, ಆಳು-ಕಾಳು, ಬಂಗಲೆ ಹೊಂದಿರುವ ಶ್ರೀಮಂತ ರೈತನ ಸಾಲವನ್ನೂ ಮನ್ನಾ ಮಾಡಬೇಕೆ ಎಂಬ ಪ್ರಶ್ನೆ ಏಳುತ್ತದೆ. ಪಂಜಾಬ್ ಮಾದರಿ ಅನುಸರಿಸಿದಲ್ಲಿ ಶ್ರೀಮಂತ ರೈತನ ಸಾಲಮನ್ನಾ ವಾಗದೆ ಕೇವಲ ಬಡ ರೈತನ ಸಾಲ ಮಾತ್ರವೇ ಮನ್ನಾ ಆಗುತ್ತದೆ. ಹಂತ ಹಂತವಾಗಿ ಸಾಲ ಮನ್ನಾ ಆಗುವ ಕಾರಣ ಸರ್ಕಾರಕ್ಕೆ ಹೆಚ್ಚು ಆರ್ಥಿಕ ಹೊರೆ ಆಗುವುದಿಲ್ಲ, ಹಾಗೂ ರೈತನಿಗೆ ಗೊಂದಲವಾಗದ ರೀತಿಯಲ್ಲಿ ನೇರವಾಗಿ ಮನೆ ಬಾಗಿಲಿಗೆ ಸಾಲಮನ್ನಾ ಪತ್ರ ರವಾನೆ ಆಗುತ್ತದೆ.

Facebook Comments

Sri Raghav

Admin