ಬಜೆಟ್’ಗೆ ಮಹೂರ್ತ ಫಿಕ್ಸ್ : ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Krishna-Byregowda--01

ಬೆಂಗಳೂರು, ಜೂ. 22: ಹದಿನೈದನೇ ವಿಧಾನ ಸಭೆಯ ಮೊದಲ ಜಂಟಿ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಜುಲೈ 2 ರಂದು ಆರಂಭಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮಿರ್ಶರ ಸರ್ಕಾರದ ಪೂರ್ಣ ಪ್ರಮಾಣದ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮೂಲಕ ನೂತನ ಸರ್ಕಾರದ ಧ್ಯೇಯೋದ್ಧೇಶಗಳನ್ನು ಪ್ರಕಟಿಸಲು ಸಂಪುಟ ಸಮ್ಮತಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದರು.
ಸಂಪ್ರದಾಯ ಹಾಗೂ ವಾಡಿಕೆಯಂತೆ ಹೊಸ ಸರ್ಕಾರವು ರಾಜ್ಯಪಾಲರ ಮೂಲಕ ಸರ್ಕಾರದ ಯೋಜನೆಗಳನ್ನು ಪ್ರಕಟಿಸುವುದರ ಜೊತೆಗೆ ಅವುಗಳನ್ನು ಬಜೆಟ್‍ನಲ್ಲಿ ಅಳವಡಿಸುವ ಅಂಶಗಳೂ ಕೂಡಾ ರಾಜ್ಯಪಾಲರ ಭಾಷಣದಲ್ಲಿ ಒಳಗೊಂಡಿರುತ್ತದೆ.   ಅಂತೆಯೇ, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯವರು ಜುಲೈ 5 ರಂದು 2018-19 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಅಧಿವೇಶನವು ಜುಲೈ 12 ರ ವರೆಗೂ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಹಂಗಾಮಿ ಸಭಾಪತಿಯಾಗಿ ಹೊರಟ್ಟಿ : 

ರಾಜ್ಯ ವಿಧಾನ ಪರಿಷತ್‍ನಲ್ಲಿ ಸಭಾಪತಿ ಹಾಗೂ ಉಪಸಭಾಪತಿಯವರ ಹುದ್ದೆ ಖಾಲಿ ಇರುವುದರಿಂದ ಕಲಾಪ ಮತ್ತಿತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯವರನ್ನಾಗಿ ನೇಮಕ ಮಾಡಲು ಸಂಪುಟ ಅನುಮೋದನೆ ನೀಡಿದೆ. ಸಭಾಪತಿ ಸ್ಥಾನ ಅಲಂಕರಿಸಿದ್ದ ಡಿ ಹೆಚ್ ಶಂಕರ ಮೂರ್ತಿ ಅವರು ಗುರುವಾರ ನಿವೃತ್ತಿ ಹೊಂದಿದ್ದರು. ಅಲ್ಲದೆ, ಉಪಸಭಾಪತಿ ಸ್ಥಾನದಲ್ಲಿದ್ದ ಮರಿತಿಬ್ಬೇಗೌಡ ಅವರು ಪುನರಾಯ್ಕೆಯಾಗಿರುವುದರಿಂದ ಆ ಹುದ್ದೆಯೂ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮೇಲ್ಮನೆಗೆ ಹಂಗಾಮಿ ಸಭಾಪತಿಯನ್ನಾಗಿ ನಿಯುಕ್ತಿಗೊಳಿಸಲು ಸಂಪುಟ ಸಭೆ ಸಮ್ಮತಿಸಿದೆ ಎಂದು ಸಚಿವರು ವಿವರಿಸಿದರು.

ಫಸಲ್ ಬಿಮಾ : ವಿಮಾ ಕಂತು ಪಾವತಿ
ಪ್ರಸಕ್ತ ಸಾಲಿನ ಮುಂಗಾರು ಹಾಗೂ ಹಿಂಗಾರು ಒಳಗೊಂಡಂತೆ ಕೃಷಿ ಮತ್ತು ತೋಟಗಾರಿಕೆಯ ಬೇಸಿಗೆಯ ಎಲ್ಲಾ ಬೆಳೆಗಳಿಗೆ ಅನ್ವಯವಾಗುವಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ 2018-19 ನೇ ಸಾಲಿನ ವಿಮಾ ಕಂತಿನÀ ಮೊತ್ತವನ್ನು ಮುಂಗಾರಿನಲ್ಲಿ ಶೇಕಡಾ ಒಂದೂವರೆ ಹಾಗೂ ಹಿಂಗಾರಿನಲ್ಲಿ ಶೇಕಡಾ ಎರಡರಷ್ಟು ರೈತರು ಪಾವತಿಸಿದಲ್ಲಿ, ವಿಮಾ ಕಂತಿನ ಉಳಿಕೆ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಪಾವತಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ವಿಮಾ ಕಂತಿನ ರಾಜ್ಯದ ಪಾಲು 655 ಕೋಟಿ ರೂ ಪಾವತಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಎಲ್ಲಾ ವಿಮೆಗಳನ್ನು ಗುಚ್ಛ ಮಟ್ಟದಲ್ಲಿ ( ಕ್ಲಸ್ಟರ್ ಲೆವೆಲ್ ) ಹವಾಮಾನ ಆಧಾರಿತ ಬೆಳೆ ಸುರಕ್ಷಾ ವಿಮಾ ಯೋಜನೆಯಲ್ಲಿ ಗೊಂಚಲು ಟೆಂಡರ್ ಆಧಾರದ ಮೇರೆಗೆ ಗುತ್ತಿಗೆ ಕಂಪನಿಗಳಿಗೆ ಹಣಪಾವತಿಸಲು ಸಂಪುಟ ತನ್ನ ಒಪ್ಪಿಗೆ ನೀಡಿದೆ.

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಮ್ಮತಿ :
ಜುಲೈ ಅಂತ್ಯದೊಳಗೆ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪೂರ್ಣಗೊಳಿಸಲು ಸಮ್ಮತಿ  ಹೊಸ ಸರ್ಕಾರದ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಯಎಲ್ಲಾ ವರ್ಗಾವಣಾ ಪ್ರಕ್ರಿಯೆಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಸಚಿವ ಸಂಪುಟ ಸಮ್ಮತಿಸಿದೆ. ಸಾಮಾನ್ಯ ವರ್ಗಾವಣಾ ಪ್ರಕ್ರಿಯೆಯ ಮಾರ್ಗಸೂಚಿಯಂತೆ ಇಲಾಖಾವಾರು ಬಲದ ಶೇಕಡಾ ಆರರ ಬದಲು ಶೇಕಡಾ ನಾಲ್ಕರಷ್ಟು ಮಾತ್ರ ವರ್ಗಾವಣೆಯನ್ನು ಮಾಡಲುಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದರು.

ಸಾಲ ಮರುಪಾವತಿ ಅವಧಿ ವಿಸ್ತರಣೆ : 
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರಂಭದ ಸಂದರ್ಭದಲ್ಲಿ ಗುತ್ತಿಗೆ ಸಂಸ್ಥೆಗೆ ರಾಜ್ಯ ಸರ್ಕಾರವು ಒದಗಿಸಿದ್ದ ಬಡ್ಡಿ-ರಹಿತ ಸಾಲ 333.50 ಕೋಟಿ ರೂ ಮರುಪಾವತಿಯ ಅವಧಿಯನ್ನು ಇನ್ನೂ ಹತ್ತು ವರ್ಷಗಳ ಕಾಲ ಮುಂದೂಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ವಿಮಾನ ನಿಲ್ದಾಣದ ಎರಡನೇ ಹಂತದ ರನ್ ವೇ ಹಾಗೂ ಎರಡನೇ ಹಂತದ ವಿಸ್ತರಣಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿ-ರಹಿತ ಸಾಲದ ಮೊತ್ತವನ್ನು ಪಾವತಿಸಲು ಕಷ್ಟವಾಗುವುದರಿಂದ ಸಾಲ ಮರುಪಾವತಿಯ ಅವಧಿಯನ್ನು ಹತ್ತು ವರ್ಷಗಳ ಕಾಲ ಮುಂದೂಡಲು ಸಂಪುಟ ತೀರ್ಮಾನಿಸಿದೆ ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ  : 
ರಾಜ್ಯ ಸರ್ಕಾರದ ಎಲ್ಲಾ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸಲು ಸಂಪುಟ ಅನುಮೋದನೆ ನೀಡಿದೆ. ಶಾಲೆಗಳು ಈಗಾಗಲೇ ಪ್ರಾರಂಭವಾಗಿರುವುದರಿಂದ ಶಾಲಾ ಅಭಿವೃದ್ಧಿ ಮಂಡಳಿಯ ಮೂಲಕ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರವನ್ನು ತ್ವರಿತವಾಗಿ ವಿತರಿಸಲು ಪ್ರತಿ ವಿದ್ಯಾರ್ಥಿಗೆ 300 ರೂ ನಂತೆ 115.8 ಕೋಟಿ ರೂ ಅನುದಾನ ಬಿಡುಗಡೆ ಸಂಪುಟ ಒಪ್ಪಿಗೆ ನೀಡಿದೆ.

ರಾಮನಗರದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ  : 
ರಾಮನಗರದಲ್ಲಿ 16.85 ಕೋಟಿ ರೂ ವೆಚ್ಚದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ಎರಡನೇ ಹಂತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಶೇಕಡಾ 60 ಹಾಗೂ ಶೇಕಡಾ 40 ರ ಅನುಪಾತದಡಿಯಲ್ಲಿ ಈ ಯೋಜನೆಗೆ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಪಾಲು 460 ಕೋಟಿ ರೂ ವೆಚ್ಚ ಭರಿಸಲು ಸಂಪುಟ ನಿರ್ಣಯಿಸಿದೆ.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ : 
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗಾನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ 26 ಕೆರೆಗಳಿಗೆ 47 ಕೋಟಿ ರೂ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗಿರುವುದರಿಂದ ಪ್ರಕೃತಿ ವಿಕೋಪ ನಿಧಿಯಲ್ಲಿ ಎಲ್ಲಾ ಜಿಲ್ಲಾಡಳಿತಗಳಲ್ಲಿ 160 ಕೋಟಿ ಅನುದಾನ ಲಭ್ಯವಿದೆ. ಈ ಮೊತ್ತವನ್ನು ಪರಿಹಾರ ಕಾರ್ಯ ಹಾಗೂ ತ್ವರಿತ ಕಾಮಗಾರಿಗಳಿಗೆ ಬಳಸಲು ಕಂದಾಯ ಸಚಿವರು ನಿರ್ದೇಶನ ನೀಡಿದ್ದಾರೆ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ರಾಜ್ಯದಿಂದ ಶಿಫಾರಸ್ಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ಬಿಟ್ಟುಕೊಡಲು ಸಂಪುಟ ನಿರ್ಧರಿಸಿದೆ ಎಂದು ಕೃಷ್ಣ ಬೈರೇಗೌಡ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin