ನಿಬ್ಬೆರಗುಗೊಳಿಸಿದ ಸೌಮ್ಯರೆಡ್ಡಿ ಮಾತು..!

ಈ ಸುದ್ದಿಯನ್ನು ಶೇರ್ ಮಾಡಿ

Soumya-Reddy--01
ಬೆಂಗಳೂರು, ಜೂ.22- ಹೆಸರು ಸೌಮ್ಯರೆಡ್ಡಿ, ಮಾತಿಗೆ ನಿಂತರೆ ಖಡಕ್..! ಜಯನಗರದಿಂದ ಇತ್ತೀಚೆಗಷ್ಟೆ ಶಾಸಕರಾಗಿ ಆಯ್ಕೆಯಾಗಿರುವ ಸೌಮ್ಯರೆಡ್ಡಿ ಅವರು ಬಿಬಿಎಂಪಿ ಸಭೆಯಲ್ಲಿಂದು ಖಡಕ್ ಆಗಿ ಮಾತನಾಡಿದ್ದು, ಪ್ರತಿಪಕ್ಷಗಳ ಸದಸ್ಯರಿಗೆ ತೀಕ್ಷ್ಣವಾಗಿ ಉತ್ತರಿಸಿದ್ದು, ನಗರ ಅಭಿವೃದ್ಧಿ ಬಗ್ಗೆ ತಾವು ಪಾಲ್ಗೊಂಡ ಮೊದಲ ಸಭೆಯಲ್ಲೇ ತಮ್ಮ ಕಾಳಜಿಯನ್ನು ಪ್ರದರ್ಶಿಸಿದ್ದು ಕ್ಷಣಕಾಲ ಸಭೆಯಲ್ಲಿದ್ದವರನ್ನು ದಿಗ್ಮೂಢರನ್ನಾಗಿಸಿತು. ಬಿಬಿಎಂಪಿಯ ಸಾಮಾನ್ಯ ಸಭೆಗೆ ಆಗಮಿಸಿದ ಜಯನಗರದ ನೂತನ ಶಾಸಕರಾದ ಸೌಮ್ಯರೆಡ್ಡಿ ಅವರು ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ, ಸಹಕರಿಸಿದ ಬಿಬಿಎಂಪಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ ಎಂದು ಹಲವಾರು ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಶಾಕಾಂಬರಿ ನಗರದ ಬಿಜೆಪಿ ಸದಸ್ಯರಾದ ಮಾಲತಿ ಸೋಮಶೇಖರ್ ಅವರು ಸೌಮ್ಯರೆಡ್ಡಿ ಅವರು ನಮ್ಮನ್ನು ಉದ್ದೇಶಿಸಿಯೇ ಮಾತನಾಡುತ್ತಿದ್ದಾರೆ ಎಂದು ತಿಳಿದು ಯಾರು ಹೇಳಿದ್ದು ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎಂದು. ಜಯನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ನೀವು ಈ ರೀತಿ ಆರೋಪ ಮಾಡುವ ಮೂಲಕ ದಿ.ಮಾಜಿ ಶಾಸಕರಾದ ವಿಜಯ್‍ಕುಮಾರ್ ಅವರನ್ನು ಅವಮಾನ ಮಾಡುತ್ತಿದ್ದೀರ ಎಂದು ಹೇಳಿದರು. ಇದರಿಂದ ಕೆರಳಿದ ಸೌಮ್ಯರೆಡ್ಡಿ ಅವರು ನಾನು ಮಾತನಾಡುತ್ತಿರೋದು ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯ. ಕೇವಲ ಜಯನಗರದ ವಿಷಯವಲ್ಲ. ನನಗೂ ವಿಜಯ್‍ಕುಮಾರ್ ಅವರ ಬಗ್ಗೆ ಗೌರವವಿದೆ. ನಮ್ಮ ತಂದೆಯವರು ಕೂಡ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ.

ಈ ಕ್ಷೇತ್ರದ ಬಗ್ಗೆ ನನಗೂ ಅಭಿಮಾನವಿದೆ. ಇಲ್ಲಿನ ಜನ ನನ್ನನ್ನೂ ಶಾಸಕರಾಗಿ ಆಯ್ಕೆ ಮಾಡಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನನಗೆ ಅಭಿವೃದ್ಧಿ ಮುಖ್ಯ. ಯಾರ ಮರ್ಜಿಯೂ ಮುಖ್ಯವಲ್ಲ ಎಂದು ಸೌಮ್ಯರೆಡ್ಡಿ ಅವರು ಪಟಪಟನೆ ನೀಡಿದ ಪ್ರತಿಕ್ರಿಯೆಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಅವಾಕ್ಕಾಗಿ ನೋಡುತ್ತಿದ್ದರು. ಪ್ರಥಮ ಬಾರಿ ಶಾಸಕರಾಗಿ ಪಾಲಿಕೆ ಸಭೆಗೆ ಆಗಮಿಸಿದ ಸೌಮ್ಯರೆಡ್ಡಿ ಅವರು ಪ್ರಥಮ ಸಭೆಯಲ್ಲಿಯೇ ತಮ್ಮ ಖದರ್‍ಅನ್ನು ತೋರಿಸಿದಂತಿತ್ತು.

Facebook Comments

Sri Raghav

Admin