ಪೋಲೀಸರ ಮೇಲೆ ಲಾಂಗ್ ಬೀಸಿದ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

arrested
ಬೆಂಗಳೂರು,ಜೂ.22- ಕೊಲೆ ಆರೋಪಿಯನ್ನು ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿದಾಗ ಆತನನನ್ನು ಸೆರೆ ಹಿಡಿದಿದ್ದಾರೆ. ಶೀಗೇಹಳ್ಳಿಯ ನಿವಾಸಿ ಚರಣ್‍ರಾಜ್(34) ಬಂಧಿತ ಆರೋಪಿ.
ಈ ಘಟನೆಯೊಂದಿಗೆ ಮತ್ತೊಮ್ಮೆ ನಗರದಲ್ಲಿ ಪೊಲೀಸ್ ರಿವಾಲ್ವರ್ ಘರ್ಜಿಸಿದ್ದು , ದುಷ್ಕರ್ಮಿಗಳಿಗೆ ಗಂಭೀರ ಸಂದೇಶ ರವಾನಿಸಿದೆ.

ಕೆಲವು ವರ್ಷಗಳಿಂದ ನಿವೇಶನದ ವಿಷಯವಾಗಿ ಆರೋಪಿ ಚರಣ್‍ರಾಜ್ ಮತ್ತು ರೌಡಿ ಮಂಜುನಾಥ್ ಅಲಿಯಾಸ್ ವಾಟರ್ ಮಂಜನ ನಡುವೆ ಜಗಳ ನಡೆದಿದ್ದು, ಇದೇ ವಿಚಾರವಾಗಿ ಇವರಿಬ್ಬರ ನಡುವೆ ವೈರತ್ವ ಉಂಟಾಗಿತ್ತು.  ಈ ವೈಷಮ್ಯದಿಂದಾಗಿ ರೌಡಿ ಮಂಜುನಾಥ್‍ನನ್ನು ತನ್ನ ಸಹಚರರೊಂದಿಗೆ ಸೇರಿಕೊಂಡು ಆರೋಪಿ ಚರಣ್‍ರಾಜ್ ಹತ್ಯೆಗೆ ಸಂಚು ರೂಪಿಸಿದ್ದನು. ಅದರಂತೆ ನಿನ್ನೆ ಮಧ್ಯಾಹ್ನ 1.30ರ ಸಮಯದಲ್ಲಿ ಕೆ.ಆರ್.ಪುರಂ ಭಟ್ಟರಹಳ್ಳಿಯ ಹಳೇಮದ್ರಾಸ್ ರಸ್ತೆ ಸಮೀಪದ ಹೆವೆನ್ ಹೋಟೆಲ್ ಮುಂಭಾಗದಲ್ಲಿ ಮಂಜುನಾಥ್ ಇರುವುದನ್ನು ಆರೋಪಿಗಳು ಖಾತ್ರಿ ಪಡೆಸಿಕೊಂಡಿದ್ದರು.  ತಕ್ಷಣ ಬೈಕ್‍ನಲ್ಲಿ ಬಂದ ಚರಣ್‍ರಾಜ್ ಹಾಗೂ ಆತನ ಸಹಚರರು ಆತನನ್ನು ಸುತ್ತುವರೆದು ಏಕಾಏಕಿ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ವೈಟ್‍ಫೀಲ್ಡ್ ಡಿಸಿಪಿ ಅವರು ನಾಲ್ಕು ತಂಡವನ್ನು ರಚಿಸಿದ್ದರು. ಈ ನಿಟ್ಟಿನಲ್ಲಿ ಕೆ.ಆರ್.ಪುರಂ ಠಾಣೆ ಇನ್‍ಸ್ಪೆಕ್ಟರ್ ಜಯರಾಜ್, ಮಹದೇವಪುರ ಠಾಣೆ ಇನ್‍ಸ್ಪೆಕ್ಟರ್ ಶ್ರೀನಿವಾಸ್, ಸಬ್‍ಇನ್‍ಸ್ಪೆಕ್ಟರ್‍ಗಳಾದ ಮಂಜುನಾಥ್, ರಂಗಪ್ಪ , ಎಎಸ್‍ಐಗಳಾದ ನಾರಾಯಣಸ್ವಾಮಿ, ಹರೀಶ್, ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಪ್ರಮುಖ ಆರೋಪಿ ಚರಣ್‍ರಾಜ್, ಕಾಡುಗೋಡಿ ಬೆಳ್ತೂರು ಕ್ರಾಸ್ ಮೂಲಕ ತನ್ನ ಮನೆಗೆ ಆ್ಯಕ್ಟೀವ್ ಹೋಂಡಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಬಗ್ಗೆ ಈ ತಂಡಕ್ಕೆ ಮಾಹಿತಿ ಲಭಿಸಿದೆ.

ತಕ್ಷಣ ಈ ತಂಡ ಬೆಳ್ತೂರು ಕ್ರಾಸ್ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ 5.40ರಲ್ಲಿ ಬೆಳ್ತೂರು ಕ್ರಾಸ್ ಮೂಲಕ ಬೈಕ್‍ನಲ್ಲಿ ಈತ ಬರುತ್ತಿದ್ದಾಗ ಪೊಲೀಸರು ಆತನಿಗೆ ನಿಲ್ಲುವಂತೆ ಕೈ ಸನ್ನೆ ಮಾಡಿದ್ದಾರೆ.  ಈ ವೇಳೆ ಬೈಕ್ ನಿಲ್ಲಿಸದೆ ಬೆಳ್ತೂರು- ಕೆ.ದೊಮ್ಮಸಂದ್ರ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ತಕ್ಷಣ ಇನ್‍ಸ್ಪೆಕ್ಟರ್ ಜಯರಾಜ್ ಅವರನ್ನೊಳಗೊಂಡ ತಂಡ ಪೊಲೀಸ್ ಜೀಪಿನಲ್ಲಿ ಬೆನ್ನಟ್ಟಿ ಆರೋಪಿ ಬೈಕ್‍ಗೆ ಅಡ್ಡ ಹಾಕಿದ್ದಾರೆ.  ತಕ್ಷಣ ಆರೋಪಿಯು ಬೈಕ್‍ನಿಂದ ಹಾರಿ ಪೊದೆಯೊಳಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸ್ ತಂಡ ಜೀಪ್‍ನಿಂದ ಇಳಿದು ಆತನನ್ನು ಹಿಡಿಯಲು ಮುಂದಾದಾಗ ಲಾಂಗ್‍ನಿಂದ ಎಎಸ್‍ಐ ಮುನಿರಾಜು ಅವರಿಗೆ ಹಲ್ಲೆ ಮಾಡಲು ಮುಂದಾದಾಗ ಲಾಠಿ ಅಡ್ಡ ಹಿಡಿದಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈ ವೇಳೆ ಆರೋಪಿಯನ್ನು ಹಿಡಿಯಲು ಹೋದ ಎಸ್‍ಐಎಸ್ ನಾರಾಯಣಸ್ವಾಮಿ ಅವರ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿದಾಗ ಇನ್‍ಸ್ಪೆಕ್ಟರ್ ಅವರು ಆತನಿಗೆ ಶರಣಾಗಲು ಸೂಚಿಸಿದ್ದಾರೆ.

ಆದರೂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನಂತರ ಮತ್ತೊಂದು ಗುಂಡು ಹಾರಿಸಿದ್ದು, ಅದು ಆರೋಪಿ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ಕಾಡುಗೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಎಎಸ್‍ಐ ನಾರಾಯಣಸ್ವಾಮಿ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ನಂತರ ಎಎಸ್‍ಐ ರಂಗಪ್ಪ , ಹೆಡ್‍ಕಾನ್‍ಸ್ಟೆಬಲ್ ಅಫ್ರೋಜ್, ಕಾನ್‍ಸ್ಟೆಬಲ್ ಮಂಜುನಾಥ ಅವರ ತಂಡ ಕಾರ್ಯಾಚರಣೆ ಮುಂದುವರೆಸಿ ಇನ್ನಿಬ್ಬರು ಆರೋಪಿಗಳಾದ ರಘು ಮತ್ತು ಮುರಳಿಯನ್ನು ಹೊಸಕೋಟೆಯಲ್ಲಿ ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರೆಸಿದೆ.

Facebook Comments

Sri Raghav

Admin