ಜಡ ಹಿಡಿದ ಆಡಳಿತ, ಕದಲದ ಕಡತಗಳು, ಸಮ್ಮಿಶ್ರ ಸರ್ಕಾರದ ವಿರುದ್ಧ ಸಾರ್ವಜನಿಕರ ಬೇಸರ..!

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

– ಉಮೇಶ್ ಕೋಲಿಗೆರೆ
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾದರೂ ಆಡಳಿತ ಚುರುಕಾಗಿಲ್ಲ. ಜಡ ಹಿಡಿದ ಆಡಳಿತ ವ್ಯವಸ್ಥೆಯಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ದಿನ ನಿತ್ಯ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಅಧಿಕಾರಿಗಳ ಉಡಾಫೆತನದಿಂದ ಸಂಪುಟ ವಿಸ್ತರಣೆಯ ನಂತರವೂ ರಾಜ್ಯ ಸರ್ಕಾರ ಜನ ಸಾಮಾನ್ಯದವರೆಗೂ ತಲುಪುವಲ್ಲಿ ವಿಫಲವಾಗುತ್ತಿದೆ. ಸಂಪುಟದಲ್ಲಿ 26 ಮಂದಿ ಸಚಿವರಿದ್ದಾರೆ. ಆದರೆ ಮುಖ್ಯಮಂತ್ರಿ ಕಚೇರಿ ಹೊರತು ಪಡಿಸಿ ಉಳಿದ ಕಚೇರಿಗಳು ಚುರುಕಾಗಿ ಕೆಲಸ ಮಾಡುತ್ತಿಲ್ಲ. ರಾಜಕೀಯ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸಲಾರಂಭಿಸಿದ್ದಾರೆ. ಬಹಳಷ್ಟು ಅಧಿಕಾರಿಗಳು ಸಚಿವರ ಮೇಲೆ ಸವಾರಿ ಮಾಡಲಾರಂಭಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಹಳಷ್ಟು ಸಚಿವರು ಇನ್ನೂ ಇಲಾಖೆಯ ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಕೆಲವು ಸಚಿವರು ನಿರಂತರವಾಗಿ ಸಭೆ ನಡೆಸಿ ಆಡಳಿತವನ್ನು ಚುರುಕುಗೊಳಿಸಲು ಹರ ಸಾಹಸ ನಡೆಸುತ್ತಿದ್ದಾರೆ.

ರೆಡ್ ಟೇಪಿಸಂನಿಂದ ಜಡ ಕಟ್ಟಿರುವ ಅಧಿಕಾರಿಗಳು ಜನ ಹಿತ ಮರೆತು ಧಿಮಾಕಿನಿಂದ ವರ್ತಿಸುತ್ತಿದ್ದಾರೆ. ಕಳೆದ ಮಾರ್ಚ್‍ನಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ದಿನಾಂಕ ಘೋಷಣೆ ಯಾಯಿತು. ಅನಂತರ ಅಧಿಕಾರಿಗಳು ಮನಸೊ ಇಚ್ಚೆ ವರ್ತಿಸಲಾರಂಭಿಸಿದ್ದಾರೆ. ಅತಂತ್ರ ವಿಧಾನಸಭೆ ನಿರ್ಮಾಣಗೊಂಡ ನಂತರವಂತೂ ಅಧಿಕಾರಿಗಳ ಪಿತ್ತ ನೆತ್ತಿಗೇರಿದೆ. ಎಲ್ಲಾ ಕಡತಗಳಿಗೂ ಅನಗತ್ಯ ಕೊಂಕು ಹಾಕಿ ಶೈತ್ಯಗಾರದಲ್ಲಿರಿಸಿದ್ದಾರೆ. ಪ್ರಮುಖ ನಿರ್ಣಯಗಳ ಕಡತಗಳು ಧೂಳು ತಿನ್ನಲಾರಂಭಿಸಿವೆ.  ಉನ್ನತಾಧಿಕಾರಿಗಳಿಂದ ಕೆಳಹಂತದವರೆಗೂ ಸರ್ಕಾರಿ ಅಧಿಕಾರಿಗಳು ತಾವೇ ಸರ್ವೋತ್ತಮರು ಎಂಬಂತೆ ವರ್ತಿಸಲಾರಂಭಿಸಿದ್ದಾರೆ. ಜನ ಸಾಮಾನ್ಯರ ಕಷ್ಟಗಳಿಗೆ ಸಚಿವಾಲಯದ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ರಾಜಕೀಯ ಪರಿಸ್ಥಿತಿಯಲ್ಲಿ ಪ್ರಭಾವಿಗಳಲ್ಲದ ಸಚಿವರ ಮಾತುಗಳಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಹೊಸ ಸರ್ಕಾರದ ಆಡಳಿತದಲ್ಲಿ ಚಲನಶೀಲತೆ ಕಂಡು ಬರಬೇಕು. ಆರಂಭದ ಉತ್ಸಾಹದಲ್ಲಿ ಸಚಿವರುಗಳು ಧಾಂಗುಡಿಯಿಟ್ಟು ಕೆಲಸ ಮಾಡಬೇಕು. ಆದರೆ ಅಂತಹ ಹುಮ್ಮಸ್ಸು ಯಾವ ಸಚಿವರಲ್ಲೂ ಕಾಣುತ್ತಿಲ್ಲ. ಸಚಿವರು ಸಭೆ ಕರೆದರೆ ಉನ್ನತ ಅಧಿಕಾರಿಗಳು ಅದರಲ್ಲಿ ಭಾಗವಹಿಸದೆ ಉದಾಸೀನತೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಅಸಹಾಯಕರಾದ ಸಚಿವರು ಕೆಳ ಹಂತದ ಅಧಿಕಾರಿಗಳ ಜೊತೆಯಲ್ಲೇ ಸಭೆ ನಡೆಸಿ ಆಡಳಿತವನ್ನು ಟೆಕಾಫ್ ಮಾಡಲು ಹರಸಾಹಸ ನಡೆಸುತ್ತಿದ್ದಾರೆ. ಅಧಿಕಾರಿಗಳ ಅಸಹಕಾರದಿಂದ ಕಡತ ವಿಲೇವಾರಿಯಂತೂ ಸ್ಥಗಿತಗೊಂಡಿದೆ.

ಕಡತಗಳ ಸ್ಥಗಿತ:
ಯಾವುದೇ ಇಲಾಖೆಗಳಲ್ಲೂ ಪ್ರಮುಖವಾದ ಕಡತಗಳ ವಿಲೇವಾರಿ ನಡೆಯುತ್ತಿಲ್ಲ. ಎಲ್ಲಾ ಸಚಿವರು ಅಧಿಕಾರಿಗಳ ಸಭೆ, ಇಲಾಖೆ ಪರಿಚಯ, ಬಜೆಟ್ ತಯಾರಿ ಬಗ್ಗೆಯಷ್ಟೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್‍ನಲ್ಲಿ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆ ಘೋಷಣೆ ಮಾಡಿತ್ತು. ಅಂದಿನಿಂದ ಎಲ್ಲಾ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ. ಸರಿಸುಮಾರು ನಾಲ್ಕು ತಿಂಗಳುಗಳಿಂದಲೂ ಕಡತಗಳು ವಿಲೇವಾರಿಯಾಗದೆ ಧೂಳು ತಿನ್ನುತ್ತಿವೆ. ಮೇ 15ಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ರಾಜಕೀಯ ಮೇಲಾಟಗಳಲ್ಲಿ ಕಾಲಹರಣವಾಯಿತು. ಮೇ 23ಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೂ ರಾಜಕೀಯ ಸ್ಥಿರತೆಯೇ ಇಲ್ಲದೆ ಆಡಳಿತ ಯಂತ್ರ ಮನಸೋ ಇಚ್ಛೆ ನಡೆಯುತ್ತಿತ್ತು.
ನೂತನ ಸಚಿವರು ಅಧಿಕಾರ ವಹಿಸಿಕೊಂಡ ನಂತರವಾದರೂ ಕಡತಗಳ ವಿಲೇವಾರಿಯಾಗುತ್ತದೆ ಎಂದು ಕಾಯುತ್ತಿದ್ದ ಜನಸಾಮಾನ್ಯರಿಗೆ ನಿರಾಸೆಯಾಗಿದೆ. ಇದು ಒಂದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೆ ಕೆಲವು ಪ್ರಮುಖ ಕಡತಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿರುತ್ತಿತ್ತು. ಆದರೆ ಮೈತ್ರಿ ಸರ್ಕಾರವಾಗಿರುವುದರಿಂದ ಹಿಂದಿನ ಸರ್ಕಾರದಲ್ಲಿ ಸಚಿವರು ಅನುಸರಿಸಿದ ನೀತಿ-ನಿಯಮಾವಳಿಗಳನ್ನು ಅನುಪಾಲನೆ ಮಾಡಬೇಕಾದ ಇಕ್ಕಟ್ಟಿನಲ್ಲಿ ನೂತನ ಸಚಿವರಿದ್ದಾರೆ.

ಯಾವ ಕಡತ, ಯಾವ ಸಚಿವರಿಗೆ, ಯಾವ ಶಾಸಕರಿಗೆ ಸಂಬಂಧಿಸಿದ್ದೋ, ಯಾವ ನಿರ್ಧಾರದ ಹಿಂದೆ ಯಾರ ಪ್ರಭಾವವಿದೆಯೋ ಎಂಬ ಗೊಂದಲಗಳು ಹೆಚ್ಚಾಗಿವೆ. ಒಂದು ವೇಳೆ ಹೆಚ್ಚು-ಕಮ್ಮಿ ನಿರ್ಧಾರ ತೆಗೆದುಕೊಂಡರೆ ನಾಳೆ ಯಾವ ಮುಖಂಡರಿಂದ ಪ್ರತಿರೋಧ ಎದುರಿಸಬೇಕಾಗುತ್ತದೋ, ತಾವು ತೆಗೆದುಕೊಂಡ ನಿರ್ಧಾರಗಳು ಬಹಿರಂಗ ಚರ್ಚೆಗೆ ಗ್ರಾಸವಾಗಿ ಮೈತ್ರಿ ಸರ್ಕಾರದಲ್ಲಿನ ಸೌಹಾರ್ದತೆಗೆ ಧಕ್ಕೆಯಾಗುತ್ತದೆಯೋ ಎಂಬ ದುಗುಡ ಬಹುತೇಕ ಸಚಿವರನ್ನು ಕಾಡುತ್ತಿದೆ. ಕೆಲವು ಪ್ರಭಾವಿ ಸಚಿವರು ಪರಿಸ್ಥಿತಿ ನಿಭಾಯಿಸುವ ಧೈರ್ಯದೊಂದಿಗೆ ಮುಂದಾದರೂ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಪ್ರತಿಯೊಂದು ಕಡತದ ಹಿಂದೆಯೂ ಒಂದೊಂದು ಕಥೆ ಇರುವುದರಿಂದ ಅದನ್ನು ಹೇಳಿ ಸಚಿವರನ್ನು ಹೆದರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹೀಗಾಗಿ ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆ ಮುಗಿದು ಹೊಸ ಅಧಿಕಾರಿಗಳು ಇಲಾಖೆಗೆ ನಿಯೋಜನೆಗೊಳ್ಳುವವರೆಗೂ ಕಡತಗಳ ಸಹವಾಸವೇ ಬೇಡವೆಂದು ಸಚಿವರು ಸಭೆಗಳಲ್ಲೇ ಕಾಲಕಳೆಯುತ್ತಿದ್ದಾರೆ ಎಂಬ ಮಾತಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪುಗೊಳ್ಳುವವರೆಗೂ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ ಎಂದು ಈಗಾಗಲೇ ಕಾಂಗ್ರೆಸ್ ಮುಖಂಡರು ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಟೇಕಾಫ್ ಆಗದ ಸ್ಥಿತಿ ಇದೆ. ಬಜೆಟ್ ರೂಪುಗೊಳ್ಳುತ್ತಿರುವುದು ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಒತ್ತಾಸೆಯಿಂದಲೇ ಹೊರತು ಕಾಂಗ್ರೆಸ್‍ನ ಬಹುತೇಕ ಸಚಿವರು ಕಾಟಾಚಾರಕ್ಕೆ ಸಹಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹೊಸ ಸರ್ಕಾರ, ಹೊಸ ವ್ಯವಸ್ಥೆ ಎಲ್ಲವೂ ಸಮತೋಲನಕ್ಕೆ ಬರಲು ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಭಾಗವಾಗಿರುವ ಎಲ್ಲಾ ಸಚಿವರು ಮನವಿ ಮಾಡುತ್ತಿದ್ದಾರೆ. ಆದರೆ ಆ ಕಾಲಾವಕಾಶ ಎಷ್ಟು ಎಂಬ ಪ್ರಶ್ನೆ ಕಾಡುತ್ತಿದೆ.  ಕಡತಗಳ ವಿಲೇವಾರಿಯಾಗದೆ, ಪ್ರಮುಖ ನಿರ್ಧಾರ ತೆಗೆದುಕೊಳ್ಳದೆ ಸರ್ಕಾರ ನಿಂತ ನೀರಂತಾಗಿರುವುದು ವ್ಯಾಪಾರೋದ್ಯಮ ಮತ್ತು ಸೇವಾ ವಲಯಗಳ ಮೇಲೆ ದುಷ್ಪರಿಣಾಮ ಬೀರುವುದಂತೂ ನಿಜ.

ಹೊಸ ಸರ್ಕಾರದ ಆಡಳಿತದಲ್ಲಿ ಚಲನಶೀಲತೆ ಕಂಡು ಬರಬೇಕು.  ಆರಂಭದ ಉತ್ಸಾಹದಲ್ಲಿ ಸಚಿವರುಗಳು ಧಾಂಗುಡಿಯಿಟ್ಟು ಕೆಲಸ ಮಾಡಬೇಕು.
ಆದರೆ ಅಂತಹ ಹುಮ್ಮಸ್ಸು ಯಾವ ಸಚಿವರಲ್ಲೂ ಕಾಣುತ್ತಿಲ್ಲ. ಸಚಿವರು ಸಭೆ ಕರೆದರೆ ಉನ್ನತ ಅಧಿಕಾರಿಗಳು ಅದರಲ್ಲಿ ಭಾಗವಹಿಸದೆ ಉದಾಸೀನತೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಅಸಹಾಯಕರಾದ ಸಚಿವರು ಕೆಳ ಹಂತದ ಅಧಿಕಾರಿಗಳ ಜೊತೆಯಲ್ಲೇ ಸಭೆ ನಡೆಸಿ ಆಡಳಿತವನ್ನು ಟೆಕಾಫ್ ಮಾಡಲು ಹರಸಾಹಸ ನಡೆಸುತ್ತಿದ್ದಾರೆ. ಅಧಿಕಾರಿಗಳ ಅಸಹಕಾರದಿಂದ ಕಡತ ವಿಲೇವಾರಿಯಂತೂ ಸ್ಥಗಿತಗೊಂಡಿದೆ.

Facebook Comments

Sri Raghav

Admin