ಇಂದೂ ಕೂಡ ಮುಂದುವರೆದ ರಾಜ್ಯ ಒಕ್ಕಲಿಗರ ಸಂಘದ ನೌಕರರ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Vakkaliga-sangha--01

ಬೆಂಗಳೂರು, ಜೂ.22- ಕಳೆದ ಹತ್ತು ದಿನಗಳಿಂದಲೂ ನಡೆಯುತ್ತಿರುವ ರಾಜ್ಯ ಒಕ್ಕಲಿಗರ ಸಂಘದ ನೌಕರರ ಮುಷ್ಕರ ಇಂದೂ ಕೂಡ ಮುಂದುವರೆದಿದೆ. ಸಂಘದ ಆಡಳಿತ ಮಂಡಳಿಯ ಮನವೊಲಿಕೆಗೆ ಬಗ್ಗದ ನೌಕರರು ತಮ್ಮ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ. ಕೆಂಪೇಗೌಡ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಿ ಮುಷ್ಕರ ಮುಂದುವರೆಸಿದ್ದಾರೆ.

ಸಂಘದ ಆಡಳಿತ ಕಚೇರಿ ಮುಂದೆ ಕಳೆದ 10 ದಿನಗಳಿಂದಲೂ ಮುಷ್ಕರ ನಡೆಸುತ್ತಿದ್ದ ಸಿಬ್ಬಂದಿ ನಿನ್ನೆ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಿದರು. ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೌಕರರ ಬೇಡಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದರೂ ಅದು ಪ್ರತಿಭಟನಾ ನಿರತ ಸಂಘದ ಸಿಬ್ಬಂದಿಗೆ ತೃಪ್ತಿ ತಂದಿಲ್ಲ. ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿಯನ್ನು ಕೈ ಬಿಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಇಂದಿನಿಂದ ಯಾವುದೇ ರೀತಿಯ ದೈನಂದಿನ ಕಾರ್ಯಗಳು ನಡೆಯಲು ಸಹಕರಿಸುವುದಿಲ್ಲ ಎಂದು ಒಕ್ಕಲಿಗರ ಸಂಘದ ನೌಕರರ ಸಂಘದ ಅಧ್ಯಕ್ಷ ಡಾ.ವಿನೋದ್ ತಿಳಿಸಿದ್ದಾರೆ. ಈ ವಿಷಯವನ್ನು ಸಂಘದ ಆಡಳಿತ ಮಂಡಳಿ ಗಮನಕ್ಕೂ ತಂದಿದ್ದು, ನೌಕರರು ಮತ್ತು ಸಂಘದ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.

ಬೇಡಿಕೆ ಈಡೇರಿಸಲಾಗಿದೆ:
ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೌಕರರ ಬೇಡಿಕೆ ಬಗ್ಗೆ ಚರ್ಚೆ ನಡೆಸಿ ಈಡೇರಿಸಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ತಿಳಿಸಿದ್ದಾರೆ. ನೌಕರರ ಪ್ರಮುಖ ಬೇಡಿಕೆಯಾಗಿದ್ದ ಹೆಚ್ಚುವರಿಯಾಗಿ ನೇಮಕವಾಗಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಇದು ಅವರ ಪ್ರಮುಖ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಿದ್ದರೂ ಮುಷ್ಕರ ಮುಂದುವರೆಸುತ್ತಿರುವುದು ಸರಿಯಲ್ಲ. ಕೂಡಲೇ ಮುಷ್ಕರ ವಾಪಸ್ ಪಡೆದು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಬೇಕೆಂದು ಹೇಳಿದರು. ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಹೆಚ್ಚುವರಿಯಾಗಿ ನೇಮಕಗೊಂಡಿದ್ದ 350 ಸಂಘದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin