ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಕಾನೂನು ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01
ಬೆಂಗಳೂರು, ಜೂ.23-ಕೇಂದ್ರ ಸರ್ಕಾರ ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿದ್ದು, ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ. ನಮ್ಮ ಹಕ್ಕುಗಳನ್ನು ಕಸಿಯಲಾಗಿದ್ದು, ಅದರ ವಿರುದ್ಧ ಕಾನೂನು ಹೋರಾಟ ಮುಂದುವರೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿನ್ನೆಯಷ್ಟೆ ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಪ್ರಕಟಿಸಿದೆ. ನಾವು ನೀರು ನಿರ್ವಹಣಾ ಮಂಡಳಿ ರಚನೆಗೆ ತಕರಾರು ವ್ಯಕ್ತಪಡಿಸುವುದಿಲ್ಲ. ಆದರೆ ಮಂಡಳಿ ರಚನೆಯಲ್ಲಿರುವ ನಿಯಮಾವಳಿಗಳೂ ಕರ್ನಾಟಕದ ಹಕ್ಕುಗಳನ್ನು ಕಸಿಯುತ್ತಿವೆ. ಇದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದರು.

ಸರ್ಕಾರ ನೀರಾವರಿ ತಜ್ಞರೊಬ್ಬರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿದೆ. ಅವರು ನೀರು ನಿರ್ವಹಣಾ ಮಂಡಳಿಯಿಂದಾಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಕಾನೂನು ಹೋರಾಟಕ್ಕಾಗಿ ರಾಜ್ಯದ ಅಡ್ವೊಕೇಟ್ ಜನರಲ್ ಅವರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು. ಒಕ್ಕೂಟ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವಂತಹ ಅಂಶಗಳು ನೀರು ನಿರ್ವಹಣಾ ಮಂಡಳಿಯಲ್ಲಿವೆ. ಆ ತಪ್ಪುಗಳನ್ನು ಸರಿಪಡಿಸಿ ಎಂದು ನಾನು ಕೇಂದ್ರ ಸರ್ಕಾರದ ಮುಂದೆ ವಾದ ಮಂಡಿಸಿದ್ದೇನೆ. ಅದನ್ನೂ ಪರಿಗಣಿಸಿಲ್ಲ. ಸುಪ್ರೀಂಕೋರ್ಟ್‍ನ ತೀರ್ಪಿನನುಸಾರ ಕೇಂದ್ರ ಸರ್ಕಾರ ಬೋರ್ಡ್ ರಚನೆ ಮಾಡಿ ತನ್ನ ಕರ್ತವ್ಯ ನಿಭಾಯಿಸಿದೆ. ಅದಕ್ಕೆ ನನ್ನ ತಕರಾರಿಲ್ಲ. ಆದರೆ ನಮ್ಮ ರಾಜ್ಯಕ್ಕಾಗಿರುವ ಅನ್ಯಾಯಗಳ ಬಗ್ಗೆ ಈಗಾಗಲೇ ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ. ಇನ್ನೊಮ್ಮೆ ಪತ್ರವನ್ನೂ ಬರೆಯುತ್ತೇನೆ. ಸವಿಸ್ತಾರವಾದ ಚರ್ಚೆಗೆ ಸಮಯ ಕೇಳಿದ್ದೆ. 15 ದಿನಗಳ ನಂತರ ಸಮಯ ನೀಡುವುದಾಗಿ ಹೇಳಿದ್ದರು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಕರ್ನಾಟಕದ ಜನ ಸಹನೆಶೀಲರು. ನಮಗೆ ತೊಂದರೆಯಾದಾಗಲೂ ಕಾನೂನನ್ನು ಪಾಲಿಸಿದ್ದೇವೆ. ಹಾಗೆಂದ ಮಾತ್ರಕ್ಕೆ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬೇಕಿಲ್ಲ ಎಂದರು. ನೀರು ನಿರ್ವಹಣಾ ಮಂಡಳಿಯಲ್ಲಿ ರಾಜ್ಯಕ್ಕೆ ಅನ್ಯಾವಾಗಿರುವುದಷ್ಟೇ ಅಲ್ಲ ಅಂತಾರಾಜ್ಯ ಜಲನೀತಿಯನ್ನು ತಿರುಚಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕದ ಆಕ್ಷೇಪ:
ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರತಿ 10 ದಿನಕ್ಕೊಮ್ಮೆ ಜಲಾಶಯದ ನೀರನ್ನು ಅಧ್ಯಯನ ಮಾಡಿ ನೀರು ಬಿಡುಗಡೆಯ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಕಾವೇರಿ ನದಿ ಪಾತ್ರದಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ಮಂಡಳಿಯೇ ನಿರ್ಧರಿಸಬೇಕು ಎಂಬ ಅಂಶಗಳು ಕೇಂದ್ರ ಸರ್ಕಾರದ ರಚಿಸಿರುವ ಸ್ಕೀಮ್‍ನಲ್ಲಿದೆ. ಇದಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

10 ದಿನಕ್ಕೊಮ್ಮೆ ನೀರು ಬಿಡುವ ತೀರ್ಮಾನ ಕೈಗೊಂಡರೆ ಮಳೆ ಬರದೆ ಜಲಾಶಯ ಖಾಲಿಯಿರುವ ಕಾಲದಲ್ಲಿ ರಾಜ್ಯದ ಜನರಿಗಾಗುವ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಮತ್ತು ಕರ್ನಾಟಕದ ರೈತರು ಬೆಳೆಯುವ ಬೆಳೆಗಳನ್ನು ಮಂಡಳಿಯವರು ನಿರ್ಧಾರ ಮಾಡಿದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಹುಟ್ಟುಹಾಕುತ್ತದೆ ಎಂಬ ಆತಂಕವೂ ಇದೆ.

Facebook Comments

Sri Raghav

Admin