ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ರಾಜ್ಯ ಹೊತ್ತಿ ಉರಿಯುತ್ತೆ : ಬೋಪಯ್ಯ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Bopaiah--01
ಬೆಂಗಳೂರು,ಜೂ.23- ನಗರದಲ್ಲಿರುವ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೆ ಕಾರಣಕ್ಕೂ ಬೆಂಗಳೂರಿನಲ್ಲಿರುವ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಲೇಬಾರದು. ಒಂದು ವೇಳೆ ಸರಕಾರ ಅಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಕೋಮು ಗಲಭೆಗೆ ಸರ್ಕಾರವೇ ನೇರ ಕಾರಣವಾಗುತ್ತದೆ ಎಂದು ಹೇಳಿದರು .

ಮುಸ್ಲಿಂ ಬಾಂಧವರು ಹಜ್ ಪ್ರವಾಸ ಕೈಗೊಳ್ಳುವ ವೇಳೆ ಅವರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು 50 ಕೋಟಿ ಅನುದಾನವನ್ನು ನೀಡಿದ್ದರು. ಇದಕ್ಕೆ ಯಾರೊ ಒಂದಿಬ್ಬರು ಹೇಳಿದರು ಎಂಬ ಕಾರಣಕ್ಕಾಗಿ ಟಿಪ್ಪು ಹೆಸರಿಡುವುದು ಸೂಕ್ತವಲ್ಲ.
ಸರ್ಕಾರ ಹಲವರ ವಿರೋಧದ ನಡುವೆಯೂ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕರ್ನಾಟಕದಲ್ಲಿ ಹಿಂಸೆ ನಡೆದೇ ತೀರುತ್ತದೆ ಎಂದು ಬೋಪಯ್ಯ ಪುನರುಚ್ಚರಿಸಿದರು. ಟಿಪ್ಪು ಸುಲ್ತಾನ್ ಯಾವತ್ತೂ ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡಲಿಲ್ಲ. ಆತ ಓರ್ವ ಧರ್ಮಾಂಧ. ಹಿಂದುಗಳು ಮತಾಂತರ ಹೊಂದಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಲಕ್ಷಾಂತರ ಮಂದಿಯನ್ನು ಕಗ್ಗೊಲೆ ಮಾಡಿದವನು.

ಟಿಪ್ಪು ಸುಲ್ತಾನ್ ಶೃಂಗೇರಿ ಶಾರದಾಂಬೆ ಪೀಠಕ್ಕೆ ಕಾಣಿಕೆ ನೀಡಿದ್ದು, ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದಾನೆಂದು ಇತಿಹಾಸಗಾರರು ಸುಳ್ಳುಗಳನ್ನು ಸೃಷ್ಟಿಸಿದ್ದಾರೆ. ಆತನ ಖಡ್ಗದಲ್ಲಿ ಪರ್ಷಿಯನ್ ಭಾಷೆ ಇತ್ತು. ಟಿಪ್ಪು ಮೈಸೂರು ವಂಶಸ್ಥರನ್ನು ನಾಶ ಮಾಡಲು ಹವಣಿಸಿದ್ದ. ಇವೆಲ್ಲವನ್ನು ಮರೆತು ಸರ್ಕಾರ ಆತ ಸ್ವತಂತ್ರ ಸೇನಾನಿ, ಮೈಸೂರು ಹುಲಿ ಎಂದು ಹೇಳುತ್ತಿರುವುದು ನಿಜವಾದ ಹೋರಾಟಗಾರರಿಗೆ ಮಾಡುತ್ತಿರುವ ಅಪಮಾನ ಎಂದು ಬೋಪಯ್ಯ ಕಿಡಿ ಕಾರಿದರು.

ಜಮೀರ್ ಅಹಮ್ಮದ್ ತಮ್ಮ ಸ್ವಂತ ಹಣದಲ್ಲಿ ಕಟ್ಟಿಸಿಕೊಂಡಿರುವ ಕಟ್ಟಡಗಳಿಗೆ ಇಲ್ಲವೇ ಅವರ ನಿವಾಸಕ್ಕೆ ಟಿಪ್ಪು ಸುಲ್ತಾನ್ ಸೇರಿದಂತೆ ಯಾರ ಹೆಸರನ್ನೇ ಇಟ್ಟುಕೊಂಡರೂ ನಮ್ಮ ಅಭ್ಯಂತರವಿಲ್ಲ. ಸಮಿತಿಯ ಒಂದಿಬ್ಬರು ಸದಸ್ಯರು ಹೇಳಿದ ತಕ್ಷಣ ಹೊಸ ನಾಮಕರಣ ಮಾಡಬೇಕಾದ ಅಗತ್ಯವಿಲ್ಲ. ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದರು. ಬೆಂಗಳೂರಿನಲ್ಲಿರುವ ಹಜ್ ಭವನಕ್ಕೆ ಟಿಪ್ಪು ಹೆಸರು ನಾಮಕರಣ ಮಾಡುವ ಉದ್ದೇಶವಿದೆ ಎಂದು ಜಮೀರ್ ಅಹಮ್ಮದ್ ನಿನ್ನೆಯಷ್ಟೇ ಹೇಳಿದ್ದರು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.

Facebook Comments

Sri Raghav

Admin