ಸಬ್‍ ಇನ್ಸ್ ಪೆಕ್ಟರ್ ಸುಮಾರಾಣಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Police-Inspcto
ಪಾಂಡವಪುರ, ಜೂ.23-ಗರ್ಭಿಣಿಯರಿಗೆ ಅವರ ಕುಟುಂಬವರ್ಗದವರು, ಬಂಧು-ಬಳಗದವರು ಸೀಮಂತ ಮಾಡುವುದು ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಕುಟುಂಬಸ್ಥರಂತೆ ಠಾಣೆಯಲ್ಲಿ ಅವರ ಸಿಬ್ಬಂದಿ ಸೀಮಂತ ಕಾರ್ಯಕ್ರಮ ಮಾಡಿದ್ದು, ಅತ್ಯಂತ ವಿಶೇಷವಾಗಿತ್ತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ತುಂಬು ಗರ್ಭಿಣಿ ಸುಮಾರಾಣಿ ಅವರ ಸೀಮಂತ ಕಾರ್ಯಕ್ರಮವನ್ನು ಮನೆಗಳಲ್ಲಿ ಕುಟುಂಬ ವರ್ಗದವರು ಮಾಡುವಂತೆಯೇ ಹಿಂದೂ ಸಂಸ್ಕøತಿಯಂತೆ ಠಾಣೆಯಲ್ಲಿ ಸಿಬ್ಬಂದಿ ಅರ್ಥಪೂರ್ಣವಾಗಿ ನೆರವೇರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸದಾ ಜಗಳ, ಗಲಾಟೆ, ಅಪರಾಧ ಚಟುವಟಿಕೆಗಳು ಸೇರಿದಂತೆ ಅನೇಕ ಘಟನೆಗಳ ಬಗ್ಗೆ ದೂರು ಪಡೆಯುವ, ಪ್ರಕರಣಗಳನ್ನು ಬಗೆಹರಿಸುವ ಠಾಣೆಯಲ್ಲಿ ಇಂಥದ್ದೊಂದು ಸಮಾರಂಭ ನಡೆದಿದ್ದು ವಿಶೇಷವಾಗಿತ್ತು. ಸಬ್‍ಇನ್ಸ್‍ಪೆಕ್ಟರ್ ಸುಮಾರಾಣಿ ಅವರು ಪಾಂಡವಪುರ ಪೊಲೀಸ್ ಠಾಣೆಗೆ ಕಳೆದ ವರ್ಷ ಕರ್ತವ್ಯಕ್ಕೆ ಹಾಜರಾಗಿ ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಉತ್ತಮ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಎಲ್ಲ ಹಿರಿಯರು, ಸುಮಾರಾಣಿ ಅವರಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಮಹಿಳಾ ಸಿಬ್ಬಂದಿ ಸುಮಾರಾಣಿ ಅವರ ಉಡಿ ತುಂಬಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಸಮಾರಂಭದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಶಂಕರಾಚಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಬ್‍ಇನ್ಸ್‍ಪೆಕ್ಟರ್ ಸುಮಾರಾಣಿ, ಸದಾ ಜಂಜಾಟ, ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಠಾಣೆಯಲ್ಲಿ ಇಂತಹ ಸಮಾರಂಭ ನಡೆಯುವುದು ಸಂತೋಷವಾಗಿದೆ. ಅದರಲ್ಲೂ ಮಹಿಳಾ ವರ್ಗಕ್ಕೆ ಸಿಕ್ಕ ಗೌರವವಾಗಿದೆ ಎಂದು ಹೇಳಿದರು.

Facebook Comments

Sri Raghav

Admin