ಸಮ್ಮಿಶ್ರ ಸರ್ಕಾರಕ್ಕೆ ‘ಪವರ್ ಸೆಂಟರ್’ಗಳದ್ದೇ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Power-Sentar--01

ಬೆಂಗಳೂರು, ಜೂ.23- ಸ್ವಪಕ್ಷೀಯರೇ ತಮ್ಮ ಬೆಂಬಲಿಗರೊಂದಿಗೆ ಗುಂಪು ಮಾಡಿಕೊಂಡು ಚರ್ಚೆ ನಡೆಸುತ್ತಿರುವುದು ಮತ್ತು ಹುದ್ದೆಗಳಿಗಾಗಿ ಲಾಬಿ ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತದ ಯಂತ್ರ ಹದಕ್ಕೆ ಬರುವ ಮುನ್ನವೇ ಹಲವಾರು ಶಕ್ತಿ ಕೇಂದ್ರಗಳು ಉದ್ಭವಿಸಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲಾಗುವ ಆತಂಕಗಳು ಎದುರಾಗುತ್ತಿವೆ.

ಈ ಹಿಂದೆ ಐದು ವರ್ಷ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚಕ್ರಾಧಿಪತಿಯಾಗಿದ್ದರು. ಉಪಮುಖ್ಯಮಂತ್ರಿ ಹುದ್ದೆಯನ್ನೂ ಸೃಷ್ಟಿಸದೆ ಪರ್ಯಾಯ ಶಕ್ತಿ ಕೇಂದ್ರಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಆದರೆ, ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದು ಅನಿವಾರ್ಯವಾಗಿತ್ತು. ಅದರ ಬೆನ್ನಲ್ಲೇ ಹಲವಾರು ಮಂದಿ ತಮ್ಮ ಅಸ್ತಿತ್ವದ ಉಳಿವಿಗಾಗಿ ಗುಂಪುಗಾರಿಕೆಯನ್ನು ಶುರುಮಾಡಿದ್ದರು.

ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿ ಕೆಲವರನ್ನು ಸಮಾಧಾನಪಡಿಸಿದೆಯಾದರೂ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನಗಳು ಹೆಪ್ಪುಗಟ್ಟಿ ಶಕ್ತಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಸಂಸದರಾದ ಎಂ.ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ಶಕ್ತಿ ಕೇಂದ್ರಗಳ ರೂವಾರಿಗಳಾಗುತ್ತಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನಪರ ಆಡಳಿತ ನೀಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ಉನ್ನತ ನಾಯಕರ ಪ್ರತಿಷ್ಠೆಯಿಂದಾಗಿ ಹೆಜ್ಜೆ ಹೆಜ್ಜೆಗೂ ಅಡೆತಡೆಗಳು ಎದುರಾಗುತ್ತಿವೆ.  ಕುಮಾರಸ್ವಾಮಿ ಅವರು ನೂತನ ಸರ್ಕಾರದ ಹೊಸ ಬಜೆಟ್ ಮಂಡನೆಗೂ ಸಿದ್ದರಾಮಯ್ಯ ಅಡ್ಡಗಾಲು ಹಾಕಲು ಯತ್ನಿಸಿದರು. ಆದರೆ, ಕುಮಾರಸ್ವಾಮಿ ಅವರು ಹೈಕಮಾಂಡ್‍ನಿಂದಲೇ ಅನುಮತಿ ಪಡೆದು ಬಂದು ಬಜೆಟ್ ತಯಾರಿ ನಡೆಸುತ್ತಿದ್ದಾರೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ವರ್ಗಾವಣೆಗೆ ಅನುಮತಿ ನೀಡಲಾಗಿದೆ. ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆ ನಿಜವಾದ ರಾಜಕಾರಣ ಅನಾವರಣಗೊಳ್ಳಲಿದೆ. ರಾಜಕೀಯ ಮತ್ತು ಅಧಿಕಾರಿಗಳ ನಡುವೆ ಅವಿನಾಭಾವ ಸಂಬಂಧವಿದ್ದು, ತಮ್ಮ ಆಪ್ತ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನಕೊಡಿಸಲು ಪ್ರತಿಯೊಬ್ಬ ನಾಯಕರೂ ಪ್ರಯತ್ನ ಪಡುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ವರ್ಗಾವಣೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.

ತಮ್ಮ ಬೆಂಬಲಿಗ ಅಧಿಕಾರಿಗಳ ಹಿತರಕ್ಷಣೆಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದು, ಶಕ್ತಿ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ನಾಯಕರ ಮನೆ ಬಾಗಿಲಿಗೆ ಎರಡನೇ ಹಂತದ ನಾಯಕರು ಮತ್ತು ಕಾರ್ಯಕರ್ತರು ಎಡತಾಕುತ್ತಿದ್ದಾರೆ. ಒಂದು ವೇಳೆ ವರ್ಗಾವಣೆಯಲ್ಲಿ ಏರುಪೇರಾದರೆ ಅದು ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುವ ಅಪಾಯವೂ ಇದೆ. ಅಧಿಕಾರಿಗಳ ಲಾಬಿ ಅತ್ಯಂತ ಬಲಿಷ್ಠವಾಗಿದ್ದು, ಅದನ್ನು ಎದುರು ಹಾಕಿಕೊಂಡು ಆಡಳಿತ ನಡೆಸುವುದು ಸುಲಭದ ಮಾತಲ್ಲ. ಅದಕ್ಕೆ ತಕ್ಕಂತೆ ಕಾಂಗ್ರೆಸ್‍ನಲ್ಲಿ ಉದ್ಬವಿಸಿರುವ ಶಕ್ತಿ ಕೇಂದ್ರಗಳು ತಮ್ಮ ಪ್ರತಿಷ್ಠೆಗಾಗಿ ಮೈತ್ರಿ ಸರ್ಕಾರವನ್ನು ಗಲಿಬಿಲಿಗೊಳಿಸುವ ಆತಂಕವೂ ಇದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಶಕ್ತಿ ಕೇಂದ್ರಗಳನ್ನು ನಿಭಾಯಿಸಿ ಮೈತ್ರಿ ಸರ್ಕಾರವನ್ನು ಅಪಾಯದ ಅಲೆಗಳಿಂದ ಯಾವ ರೀತಿ ದಾಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin