ದೆಹಲಿಯಲ್ಲಿ ಸೇನಾ ಮೇಜರ್ ಪತ್ನಿಯ ಕತ್ತು ಸೀಳಿ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Army--01

ನವದೆಹಲಿ, ಜೂ.24-ಸೇನೆಯ ಮೇಜರ್ ಒಬ್ಬರ 30 ವರ್ಷದ ಪತ್ನಿಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಬ್ರಾರ್ ಚೌಕ್ ಬಳಿ ನಿನ್ನೆ ನಡೆದಿದೆ. ಈ ಮಹಿಳೆ ನಿನ್ನೆ ಬೆಳಗ್ಗೆ ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಗಾಗಿ ಮನೆಯಿಂದ ಹೊರ ಹೋಗಿದ್ದರು. ಆದರೆ ಅರ್ಧಗಂಟೆಯಲ್ಲೇ ರಸ್ತೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಅವರನ್ನು ಮತ್ತೆ ಮನೆ ಕರೆತರಲು ಮೇಜರ್ ಅವರ ಅಧಿಕೃತ ಕಾರು ಚಾಲಕ ಆಸ್ಪತ್ರೆಗೆ ತೆರಳಿದಾಗ ಅವರು ಅಲ್ಲಿರಲಿಲ್ಲ. ಚಾಲಕ ಆಕೆಯನ್ನು ಆಸ್ಪತ್ರೆ ಬಳಿ ಬಿಟ್ಟು ಹೋದ ಬಳಿಕ ಇನ್ನೊಂದು ಕಾರಿನಲ್ಲಿ ಅವರು ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ನಂತರ ಅದೇ ಮಾರ್ಗದಲ್ಲಿ ರಸ್ತೆಯಲ್ಲಿ ಆಕೆ ಮೃತದೇಹ ಪತ್ತೆಯಾಯಿತು. ಆಕೆಯ ಮೇಲೆ ವಾಹನ ಹರಿದು ಮೃತಪಟ್ಟಿರಬಹುದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಹರಿತವಾದ ಆಯುಧದಿಂದ ಆಕೆಯ ಕತ್ತನ್ನು ಸೀಳಿ ಕೊಂದಿರುವುದು ಕಂಡುಬಂತು.

ಹಂತಕ ಆಕೆಯನ್ನು ಕೊಂದು ರಸ್ತೆಯಲ್ಲಿ ಎಸೆದು ನಂತರ ಅವರ ಮೇಲೆ ಕಾರನ್ನು ಹತ್ತಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಪರಿಚಯಸ್ಥರೇ ಈ ಕೃತ್ಯ ನಡೆಸಿರುವ ಸಾಧ್ಯತೆ ದಟ್ಟವಾಗಿದ್ದು, ಮೇಜರ್ ಪತ್ನಿಯ ಮೊಬೈಲ್ ಕರೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಹಂತಕನ ಬಗ್ಗೆ ಸುಳಿವು ಲಭಿಸಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸುವುದಾಗಿ ಡಿಸಿಪಿ (ಪಶ್ಚಿಮ) ವಿಜಯಕುಮಾರ್ ತಿಳಿಸಿದ್ದಾರೆ.

Facebook Comments

Sri Raghav

Admin