ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್ ಹೆಸರು ಫೈನಲ್..?

ಈ ಸುದ್ದಿಯನ್ನು ಶೇರ್ ಮಾಡಿ

H-K-Patil

ಬೆಂಗಳೂರು, ಜೂ.24- ಕಾಂಗ್ರೆಸ್‍ನ ಹಿರಿಯ ಮುಖಂಡರು, ಶಾಸಕರು ಹಾಗೂ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಒಲಿಯುವುದು ಬಹುತೇಕ ಖಚಿತವಾಗಿದೆ. ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲ್ ಅವರ ನಡುವೆ ಅಧ್ಯಕ್ಷ ಹುದ್ದೆಗೆ ಪೈಪೋಟಿ ನಡೆದಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಬೇಕಾದ ಹಿನ್ನೆಲೆಯಲ್ಲಿ ಎಚ್.ಕೆ.ಪಾಟೀಲ್ ಅವರ ಆಯ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದ್ದು, ಎರಡು-ಮೂರು ದಿನಗಳಲ್ಲಿ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

ಪಾಟೀಲ್ ಅವರು ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷ ಸಂಘಟನೆಯಲ್ಲೂ ಕೂಡ ತೊಡಗಿಸಿಕೊಂಡವರು. ಇಂದಿರಾಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್‍ಗೆ ನಿಷ್ಟರಾಗಿರುವ ಎಚ್.ಕೆ.ಪಾಟೀಲ್ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಪ್ರಸ್ತುತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಹಿರಿಯರಾದ ಇವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಉಪಮುಖ್ಯಮಂತ್ರಿ, ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಇವರು ಅಧ್ಯಕ್ಷ ಸ್ಥಾನ ತೆರವುಗೊಳಿಸಲಿರುವ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ದಿನೇಶ್‍ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಟಿ.ಬಿ.ಜಯಚಂದ್ರ ಅವರ ಹೆಸರುಗಳು ಕೇಳಿ ಬಂದಿದ್ದವು. ಕೊನೆಯಲ್ಲಿ ದಿನೇಶ್‍ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಪಾಟೀಲ್ ಅವರ ಆಯ್ಕೆ ಬಹುತೇಕ ಖಚಿತವಾದಂತಿದೆ.

ವರಿಷ್ಠರಾದ ಆಸ್ಕರ್‍ಫರ್ನಾಂಡೀಸ್, ಮಲ್ಲಿಕಾರ್ಜುನಖರ್ಗೆ ಅವರು ಎಚ್.ಕೆ.ಪಾಟೀಲ್ ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಯುವ ಮುಖಂಡರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತರಬೇಕು ಎಂಬುದು ರಾಹುಲ್‍ಗಾಂಧಿ ಅವರ ಆಶಯವಾಗಿತ್ತಾದರೂ ಅನುಭವಿ, ಹಿರಿಯರನ್ನು ಈ ಹುದ್ದೆಗೆ ನೇಮಿಸಬೇಕು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬೇಕು ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಒತ್ತಾಸೆಯಾಗಿದೆ.

ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ದೊರೆತಿಲ್ಲ. ಪಕ್ಷದಲ್ಲೂ ಹೆಚ್ಚು ಸ್ಥಾನ-ಮಾನಗಳು ಸಿಕ್ಕಿಲ್ಲ. ಖಾಲಿ ಆಗಲಿರವ ಅಧ್ಯಕ್ಷ ಹುದ್ದೆಯನ್ನು ಉತ್ತರ ಕರ್ನಾಟಕ ಭಾಗಕ್ಕೆ ದೊರಕಿಸಿಕೊಡಬೇಕೆಂಬುದು ನಾಯಕರ ಆಗ್ರಹವಾಗಿದೆ. ಇದನ್ನು ಹೈಕಮಾಂಡ್ ಪರಿಗಣಿಸಿದರೆ ಎಚ್.ಕೆ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಾವುದುರಲ್ಲಿ ಅನುಮಾನವಿಲ್ಲ

Facebook Comments

Sri Raghav

Admin