ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮತ್ತಷ್ಟು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Parameshwar

ಬೆಂಗಳೂರು, ಜೂ.25- ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಸಂಪುಟಕ್ಕೆ ಹೊಸದಾಗಿ ನಾಲ್ವರಿಂದ ಐವರ ಸೇರ್ಪಡೆ ಹಾಗೂ 30 ರಿಂದ 40 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿತ್ತು. ಹೈಕಮಾಂಡ್‍ನ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಆದರೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಚಿಕಿತ್ಸೆಗೆಂದು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿದ್ದರಿಂದ ಅವರು ಹಿಂತಿರುಗುವವರೆಗೂ ಈ ಪ್ರಕ್ರಿಯೆ ಕೈಗೊಳ್ಳದಿರಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ವಿಳಂಬವಾಗಲಿದೆ.

ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳು ಆದ ಪರಮೇಶ್ವರ್ ಅವರು ಪಟ್ಟಿ ಫೈನಲ್ ಮಾಡಿಕೊಂಡು ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿ ಅನುಮತಿ ಪಡೆದಿದ್ದರು. ಆದರೂ ಅವರ ಅನುಪಸ್ಥಿತಿಯಲ್ಲಿ ಪ್ರಕಟಿಸಿ ಸಂಭಾವ್ಯ ಬಂಡಾಯದಿಂದಾಗುವ ವಿವಾದವನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು. ಅವರು ಬಂದ ಮೇಲೆಯೇ ಪ್ರಕಟಿಸೋಣ ಎಂದು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದು ತಿಳಿದುಬಂದಿದ್ದು, ಬಹುಶಃ ಬಜೆಟ್ ಅಧಿವೇಶನದ ನಂತರ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‍ನಲ್ಲಿ ಭಿನ್ನಮತದ ಜ್ವಾಲೆ ಭುಗಿಲೆದ್ದಿತ್ತು. ಬಂಡಾಯದ ಬಿಸಿಯನ್ನು ಶಮನಗೊಳಿಸಲು ಮತ್ತೆ ನಾಲ್ಕರಿಂದ ಐದು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ತೀರ್ಮಾನ ಮಾಡಲಾಗಿತ್ತು. ಬಜೆಟ್ ಅಧಿವೇಶನ ಪ್ರಾರಂಭಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಈ ಸಂಬಂಧ ಹೈಕಮಾಂಡ್ ಜೊತೆ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರೊಂದಿಗೂ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

ಇದಲ್ಲದೆ, ಪೂರ್ಣ ಬಜೆಟ್ ಮಂಡಿಸುವುದು ಬೇಡ, ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್‍ಡಿಕೆ ಅವರ ಬಜೆಟ್ ಮಂಡನೆ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಎಚ್‍ಡಿಕೆ ಅವರು ರಾಹುಲ್‍ಗಾಂಧಿ ಬಳಿ ಈ ಬಗ್ಗೆ ಚರ್ಚೆ ನಡೆಸಿ ಕೋರಿದ ಬೆಂಬಲಕ್ಕೆ ರಾಹುಲ್ ಸಹಮತ ವ್ಯಕ್ತಪಡಿಸಿದ್ದರು.  ಸಿದ್ದರಾಮಯ್ಯನವರು ಈ ವಿಷಯದಲ್ಲಿ ಸಹಜವಾಗಿಯೇ ಗರಂ ಆಗಿದ್ದರು. ನಿನ್ನೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಬಜೆಟ್ ಮಂಡನೆ, ಸಾಲಮನ್ನಾ, ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ವಿಷಯದ ಬಗ್ಗೆ ಪರಮೇಶ್ವರ್ ಅವರು ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಮಾಡಿ ಎಂದು ಹೇಳಿದರಾದರೂ ಪರಮೇಶ್ವರ್ ಅವರು ಬೆಂಗಳೂರಿಗೆ ಹಿಂತಿರುಗಿದ ಮೇಲೆಯೇ ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದ್ದು, ಹಾಗಾಗಿ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ.

Facebook Comments

Sri Raghav

Admin