ವಿಧ್ವಂಸಕ ಕೃತ್ಯಗಳ ಮೂಲಕ ಸೇಡು ತೀರಿಸಿಕೊಳ್ಳಲು 275ಕ್ಕೂ ಹೆಚ್ಚು ಪಾಕ್ ಉಗ್ರರು ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ಶ್ರೀನಗರ, ಜೂ.25-ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ದಮನ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿರುವ ಬೆನ್ನಲ್ಲೇ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ದೊಡ್ಡ ಗುಂಪೊಂದು ಸಜ್ಜಾಗಿದೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ.

ಜ ಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ದೇಶದೊಳಗೆ ನುಗ್ಗಲು 275ಕ್ಕೂ ಹೆಚ್ಚು ಉಗ್ರರು ಸಜ್ಜಾಗಿದ್ದು, ಈಗಾಗಲೇ ಪೂರ್ವ ತಯಾರಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಇದೀಗ ಬಯಲಾಗಿದೆ. ರಂಜಾನ್ ನಂತರ ಉಗ್ರರನ್ನು ಭದ್ರತಾ ಪಡೆಗಳು ದಮನ ಮಾಡುತ್ತಿದ್ದು, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಕೃಪಾಪೋಷಿತ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಕಾಶ್ಮೀರದ ಗಡಿ ಜಿಲ್ಲೆ ಬಾರಾಮುಲ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್, ಕಾಶ್ಮೀರ ಕಣಿವೆಯಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೇ ಗಡಿ ನಿಯಂತ್ರಣ ರೇಖೆ (ಎಲ್‍ಒಡಿ) ಮೂಲಕ ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸೆಗಲು 30 ತಂಡಗಳ ಒಟ್ಟು 275 ಉಗ್ರರು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಉಗ್ರರ ವಿರುದ್ಧ ಆಲ್‍ಔಟ್ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ತೀವ್ರಗೊಳಿಸಿದೆ. ಮೂರು ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಜಮ್ಮು ಅಂಡ್ ಕಾಶ್ಮೀರ್(ಐಎಸ್‍ಜೆಕೆ) ಮುಖಂಡ ದಾವೂದ್ ಸೇರಿದಂತೆ ನಾಲ್ವರು ಉಗ್ರಗಾಮಿಗಳನ್ನು ಯೋಧರು ಹೊಡೆದುರುಳಿಸಿದ್ದರು. ಹಿಟ್ ಲಿಸ್ಟ್‍ನಲ್ಲಿದ್ದ 22 ಕುಖ್ಯಾತ ಉಗ್ರರಲ್ಲಿ ಇಬ್ಬರನ್ನು ಸೇನೆ ಬೇಟೆಯಾಡಿತ್ತು. ಈ ಹಿನ್ನೆಲೆಯಲ್ಲಿ ಯೋಧರೂ ಸೇರಿದಂತೆ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಉಗ್ರರು ಸಜ್ಜಾಗಿದ್ದು, ಕಣಿವೆ ರಾಜ್ಯ ಸೇರಿದಂತೆ ವಿವಿಧೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin