ಸಿದ್ದರಾಮಯ್ಯಗೆ ನೇರವಾಗಿಯೇ ಟಾಂಗ್ ಕೊಟ್ಟು ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Vs-Kumaraswamy

ಬೆಂಗಳೂರು,ಜೂ.25- ನಾನು ಯಾರ ಹಂಗಿನಲ್ಲೂ ಇಲ್ಲ. ನನಗೆ ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎಂಬುದು ಮುಖ್ಯವಲ್ಲ. ಇರುವಷ್ಟು ದಿನ ಬದ್ಧತೆಯಿಂದ ಕೆಲಸ ಮಾಡುತ್ತೇನೆ… ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೇರವಾಗಿಯೇ ಟಾಂಗ್ ನೀಡಿದ ಪರಿ. ನಿನ್ನೆಯಷ್ಟೇ ಧರ್ಮಸ್ಥಳದ ಉಜಿರೆಯಲ್ಲಿ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಎಲ್ಲಿಂದ ಹಣ ತರುತ್ತಾರೆ? ಹೊಸ ಬಜೆಟ್ ಮಂಡಿಸುವ ಅಗತ್ಯವಾದರೂ ಏನಿತ್ತು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದರು.

ಇದಕ್ಕೆ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಕಠಿಣ ಮಾತುಗಳಲ್ಲೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ಯಾರ ಹಂಗಿನಲ್ಲೂ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‍ಗೆ ಬಿಸಿ ಮುಟ್ಟಿಸಿದರು.  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು, ವ್ಯವಸ್ಥಾಪಕರು, ನಿರ್ದೇಶಕರು ಸೇರಿದಂತೆ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ನೆಪದಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಕುಮಾರಸ್ವಾಮಿ ಸಾಲಮನ್ನಾ ಮಾಡಲು ಎಲ್ಲಿಂದ ಹಣ ತರುತ್ತಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ 53 ಸಾವಿರ ಕೋಟಿ ಹೊರೆ ಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ನನಗೆ ರೈತರ ಸಾಲ ಮನ್ನಾ ಮಾಡುವುದರಿಂದ ಕಮಿಷನ್ ಬರುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಬೇರೊಬ್ಬರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನನಗೆ ನನ್ನದೇ ಆದ ಬದ್ಧತೆ ಇದೆ. ಆದ್ದರಿಂದಲೇ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ವಾಗ್ದಾನದಂತೆ ಸಾಲ ಮನ್ನಾ ಮಾಡಲು ಮುಂದಾಗಿದ್ದೇನೆ ಎಂದರು.
ಸಂಪನ್ಮೂಲ ಹೇಗೆ ಕ್ರೋಢೀಕರಣ ಮಾಡಬೇಕೆಂಬುದು ಈ ಹಿಂದೆ 20 ತಿಂಗಳ ಆಡಳಿತ ನಡೆಸಿರುವ ನನಗೆ ಗೊತ್ತು. ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಯಿತು. ನಾನು ಇದನ್ನೇ ನೋಡಿಕೊಂಡು ಕೂತಿರಬೇಕೆ? ಅಧಿಕಾರ ನಡೆಸುವುದು ಬೇಡವೇ ಎಂದು ಗರಮ್ಮಾಗಿಯೇ ಪ್ರಶ್ನಿಸಿದರು.
ಬಜೆಟ್ ಮಂಡಿಸಲು ನಾನು ರಾಹುಲ್ ಗಾಂಧಿ ಅವರ ಅನುಮತಿ ಪಡೆದಿದ್ದೇನೆ ಎಂಬುದು ಸುಳ್ಳು. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಯಾರು ಯಾವ ಕಾರಣಕ್ಕಾಗಿ ಈ ಸುದ್ದಿಗಳನ್ನು ಹಬ್ಬಿಸುತ್ತಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಅಧಿಕಾರಿಗಳ ಜೊತೆ ಈವರೆಗೂ ಸೌಮ್ಯದಿಂದಲೇ ವರ್ತಿಸಿದ್ದೇನೆ. ಬೇರೆಯವರ ರೀತಿ ದುರಹಂಕಾರ ಇಲ್ಲವೇ ಗಡಸುತನದಿಂದ ಬೆದರಿಸಿ ಆಡಳಿತ ನಡೆಸುವ ಪರಿಪಾಠ ನಾನು ಬೆಳೆಸಿಕೊಂಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.  ನನಗೆ ಕೆಲವರು ಮುಖ್ಯಮಂತ್ರಿ ಸ್ಥಾನವನ್ನು ಭಿಕ್ಷೆ ಕೊಟ್ಟವರಂತೆ ಮಾತನಾಡುತ್ತಿದ್ದಾರೆ. ನಾನು ಯಾರ ಹಂಗಿಲ್ಲದೆ ಆಡಳಿತ ನಡೆಸುತ್ತಿದ್ದೇನೆ. ಈ ಸರ್ಕಾರ ಇರುವವರೆಗೂ ರೈತರ ಪರವಾಗಿಯೇ ಇರುತ್ತದೆ. ನಾಡಿನ ಆರೂವರೆ ಕೋಟಿ ಜನರ ವಿಶ್ವಾಸದಂತೆ ನಡೆದುಕೊಳ್ಳುತ್ತೇನೆ ಎಂದು ವಾಗ್ದಾನ ಮಾಡಿದರು.  ಸಾಲದಿಂದ ಯಾವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ವರದಿಗಳು ಪತ್ರಿಕೆಗಳಲ್ಲಿ ಬರುತ್ತಿವೆ. ನಾನು ಎಲ್ಲವನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದೇನೆ. ಹಿಂದೆ 50 ಸಾವಿರದವರೆಗೆ ರೈತರ ಸಾಲ ಮನ್ನಾ ಮಾಡಲಾಗಿದೆ.

ಸಹಕಾರಿ ಕ್ಷೇತ್ರದಲ್ಲಿ 7 ಸಾವಿರ ಕೋಟಿ ಹಣವನ್ನು ತುಂಬಬೇಕು. ಒಂದು ಕಡೆ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು. ಮತ್ತೊಂದು ಕಡೆ ಜನತೆಗೆ ಕೊಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಸಾಲ ಮನ್ನಾ ಮಾಡುವುದು ನಮ್ಮ ಮನೆಯನ್ನು ತುಂಬಿಸಿಕೊಳ್ಳುವುದಕ್ಕಲ್ಲ. ರೈತರಿಗೆ ಅನುಕೂಲವಾಗಬೇಕೆಂಬ ಕಾರಣಕ್ಕಾಗಿ ಈ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ:
ಜುಲೈ 5ರಂದು ನಾನು ಸಮ್ಮಿಶ್ರಸರ್ಕಾರದ ಹೊಸ ಬಜೆಟ್ ಮಂಡಿಸಬೇಕೆಂದು ತೀರ್ಮಾನ ಕೈಗೊಂಡಿದ್ದೇನೆ. ಈಗಿನ ಪರಿಸ್ಥಿತಿ ನೋಡಿದರೆ ಬಜೆಟ್ ಮಂಡಿಸುತ್ತೇನೋ ಇಲ್ಲವೋ ಎಂಬ ಗೊಂದಲದಲ್ಲಿದ್ದೇನೆ ಎಂದು ಹೇಳಿದರು. ಕಳೆದ ಬಾರಿ ಇದ್ದವರ ಪೈಕಿ 100 ಶಾಸಕರು ಚುನಾವಣೆಯಲ್ಲಿ ಸೋತಿದ್ದಾರೆ. ಕಳೆದ ಸರ್ಕಾರದ ಬಜೆಟ್‍ನ್ನು ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ 100 ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ಮಂಡಿಸಿದರೆ ನಾವು ಏನು ಮಾಡುವುದು. ಅದಕ್ಕಾಗಿಯೇ ಹೊಸ ಬಜೆಟ್‍ಗೆ ಮುಂದಾಗಿರುವುದಾಗಿ ಎಂದು ಕುಮಾರಸ್ವಾಮಿ ಹೇಳಿದರು.

Facebook Comments

Sri Raghav

Admin