ನನಗೆ ಅಡ್ಡಿ ಮಾಡಿದರೆ ಜೈಲು ಸೇರಬೇಕಾಗುತ್ತೆ : ಡಿಎಂಕೆಗೆ ಗೌರ್ನರ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

DKM-Tamilnadu

ಚೆನ್ನೈ, ಜೂ.25-ಸರ್ಕಾರದ ವಿವಿಧ ಇಲಾಖೆಗಳ ಪರಾಮರ್ಶೆಗಾಗಿ ಜಿಲ್ಲೆಗಳಿಗೆ ಕ್ಷೇತ್ರ ಭೇಟಿ ನೀಡುತ್ತಿರುವ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮತ್ತು ಡಿಎಂಕೆ ನೇತೃತ್ವದ ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಜಟಾಪಟಿ ಈಗ ಹೊಸ ತಿರುವು ಪಡೆದುಕೊಂಡಿದೆ.
ಸಂವಿಧಾನದ ಅಡಿ ನನಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸಲು ಯಾರಾದರೂ ಅಡ್ಡಿ ಮಾಡಿದರೆ ಅವರು ಜೈಲು ಮತ್ತು ಜುಲ್ಮಾನೆಗೆ ಒಳಗಾಗಬೇಕಾಗುತ್ತದೆ ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ.

ಈ ಬೆದರಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿಧಾನಸಭೈ ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, ರಾಜ್ಯಪಾಲರು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದ್ದಾರೆ. ವಿರೋಧ ಪಕ್ಷಗಳ ಮುಖಂಡರನ್ನು ಬಂಧಿಸಿ ಜೈಲು ಶಿಕ್ಷೆ ವಿಧಿಸುವುದಾಗಿ ರಾಜ್ಯಪಾಲರು ನೀಡಿರುವ ಹೇಳಿಕೆ ಖಂಡನಾರ್ಹ ಎಂದು ಟೀಕಿಸಿದ್ದಾರೆ.  ರಾಜ್ಯಪಾಲರು ವಿನಾಕಾರಣ ಎಲ್ಲ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದು ಅವರ ಹುದ್ದೆಗೆ ಶೋಭೈ ತರುವಂಥದ್ದಲ್ಲ ಎಂದು ಡಿಎಂಕೆ ಮತ್ತು ಪ್ರತಿಪಕ್ಷಗಳು ಟೀಕಿಸಿದ್ದವು. ಇದಕ್ಕೆ ನಿನ್ನೆ ಹೇಳಿಕೆ ನೀಡಿರುವ ರಾಜಭವನ, ರಾಜ್ಯಪಾಲರ ಕಾರ್ಯಾಲಯಕ್ಕೆ ಐಪಿಸಿ ಸೆಕ್ಷನ್ 124ರ ಅಡಿ ರಕ್ಷಣೆ ಇದೆ. ಕಾನೂನು ಸಮ್ಮತವಾಗಿ ಪ್ರದತ್ತವಾದ ಯಾವುದೇ ಅಧಿಕಾರಗಳನ್ನು ಚಲಾಯಿಸುವುದಕ್ಕೆ ರಾಜ್ಯಪಾಲರಿಗೆ ಕ್ರಿಮಿನಲ್ ಬಲವಂತದಿಂದಾಗಲಿ ಅಥವಾ ಇತರ ಕೃತ್ಯಗಳಿಂದಾಗಲಿ ಅಡ್ಡಿ ಉಂಟು ಮಾಡಿದರೆ ಅಂಥವರಿಗೆ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸರ್ಕಾರದ ಇಲಾಖೆಗಳ ಕಾರ್ಯವೈಖರಿಯನ್ನು ಪರಾಮರ್ಶಿಸಲು ಆಯಾ ಇಲಾಖೆಗಳ ಸಚಿವರಿದ್ದಾರೆ. ರಾಜ್ಯಪಾಲರು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಗೌರ್ನರ್ ಅವರ ಈ ಕ್ರಮವು ಪರ್ಯಾಯ ಆಡಳಿತದ ಯತ್ನವಾಗಿದೆ. ಇದರ ವಿರುದ್ಧ ಸರ್ಕಾರದ ಹಿತಾಸಕ್ತಿಗಾಗಿ ನಾವು ಕಪ್ಪು ಬಾವುಟ ಪ್ರದರ್ಶನ ಪ್ರತಿಭಟನೆ ಮುಂದುವರಿಸುವುದಾಗಿ ಸ್ಟಾಲಿನ್ ಹೇಳಿದ್ಧಾರೆ.  ಇದರೊಂದಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮತ್ತು ವಿರೋಧಪಕ್ಷಗಳ ಮುಖಂಡರ ನಡುವೆ ಹಗ್ಗ-ಜಗ್ಗಾಟ ಮುಂದುವರಿದಂತಾಗಿದೆ.

Facebook Comments

Sri Raghav

Admin