ಬೆಂಗಳೂರು ನಗರ ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

sadananda

ಬೆಂಗಳೂರು, ಜೂ.25- ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜಿ.ಪಂ ಸಿಇಒಗೆ ಸೂಚನೆ ನೀಡಿದ್ದಾರೆ.
ಇಂದು ನಡೆದ ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಬ್ಯಾಂಕ್‍ಗಳ ಮೂಲಕ ಕಲ್ಪಿಸಬಹುದಾದ ಸಾಲ ಸೌಲಭ್ಯ ಇತ್ಯಾದಿಗಳ ಬಗೆಗಿನ ಪ್ರಗತಿ ಪರಿಶೀಲನಾ ಸಭೆಗೆ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದರು.

ಇದರಿಂದ ಆಕ್ರೋಶಗೊಂಡ ಸಚಿವರು ಕೂಡಲೇ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು. ಮೂರು ತಿಂಗಳಿಗೊಮ್ಮೆ ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಗೊಳಿಸುವ ನೋಡಲ್ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಬಡವರಿಗೆ ಸಹಾಯ ಮಾಡಲು ಸಾಧ್ಯವಾಗುವಂತಹ ಯೋಜನೆಗಳನ್ನು ಹೀಗೆ ನಿರ್ಲಕ್ಷಿಸಿದರೆ ಹೇಗೆ ಎಂದು ಸಿಡಿಮಿಡಿಗೊಂಡರು. ಬಹಳಷ್ಟು ಬ್ಯಾಂಕ್‍ಗಳು ಬಡವರಿಗೆ ಕೇವಲ 50,000 ದಿಂದ 1 ಲಕ್ಷದವರೆಗಿನ ಸಾಲಕ್ಕೆ ಇಲ್ಲ ಸಲ್ಲದ ಷರತ್ತುಗಳನ್ನು ವಿಧಿಸುತ್ತಾರೆ. ನಿಮ್ಮ ಮನೆ, ನಿವೇಶನ ಇತ್ಯಾದಿ ಆಸ್ತಿಗಳ ಶ್ಯೂರಿಟಿ ಕೇಳಿದರೆ ಅವರು ಎಲ್ಲಿಂದ ತರುತ್ತಾರೆ. ಸರಳವಾಗಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುಂದೆ ಬರಲು ಬ್ಯಾಂಕ್‍ಗಳು ಒಂದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಚಿವರು ಕಿವಿಮಾತು ಹೇಳಿದರು.

ಕೃಷಿ ಆಧಾರಿತ ಹಾಗೂ ರೈತರಿಗೆ ಹೆಚ್ಚಿನ ನೆರವು ನೀಡಬೇಕು ಎಂದು ಹೇಳಿದರಲ್ಲದೆ ಸಾವಿರಾರು ಕೋಟಿ ಸಾಲ ಪಡೆದು ದೊಡ್ಡ ಕಂಪೆನಿಗಳು ಸಾಲ ಮರು ಪಾವತಿ ಮಾಡದೆ ಇರುವುದನ್ನು ಈಗ ನಾವು ನೋಡುತ್ತಿದ್ದೇವೆ. ಇದು ದೇಶದ ಪ್ರಗತಿಗೂ ಮಾರಕ ಎಂದು ಹೇಳಿದರು. ಸಾಮಾನ್ಯ ಜನಕ್ಕೆ ಅಗತ್ಯವಾದ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡುವತ್ತ ಹೆಚ್ಚಿನ ಒತ್ತು ನೀಡಿ ಜನ ಸ್ನೇಹಿಯಾಗಿ ಬ್ಯಾಂಕ್‍ಗಳು ಪರಿವರ್ತನೆಗೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತ ಕೂಡ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

Facebook Comments

Sri Raghav

Admin