4 ತಿಂಗಳಲ್ಲಿ ನಾಡಪ್ರಭು ಕೆಂಪೇಗೌಡರ ವಸ್ತು ಸಂಗ್ರಹಾಲಯದ ಸಮಗ್ರ ಅಭಿವೃದ್ಧಿ

ಈ ಸುದ್ದಿಯನ್ನು ಶೇರ್ ಮಾಡಿ

Mayor--02

ಬೆಂಗಳೂರು, ಜೂ.26- ನಗರದ ಮೇಯೋಹಾಲ್‍ನಲ್ಲಿರುವ ನಾಡಪ್ರಭು ಕೆಂಪೇಗೌಡರ ವಸ್ತು ಸಂಗ್ರಹಾಲಯವನ್ನು ನಾಲ್ಕು ತಿಂಗಳೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ತಿಳಿಸಿದರು.

ಕೆಂಪೇಗೌಡ ವಸ್ತು ಸಂಗ್ರಹಾಲಯ ಅಭಿವೃದ್ಧಿ ಕುರಿತಂತೆ ಇಂದು ಮೇಯರ್ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ , ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಒಕ್ಕಲಿಗ ಜನಾಂಗದ ಮುಖ್ಯಸ್ಥರಾದ ತಲಕಾಡು ಚಿಕ್ಕರಂಗೇಗೌಡ , ಮರಿಮಲ್ಲಪ್ಪ ಮತ್ತಿತರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮೇಯರ್ ಮಾತನಾಡಿದರು.

ಬಜೆಟ್‍ನಲ್ಲಿ ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಏಳೂವರೆ ಕೋಟಿ ರೂ. ಮೀಸಲಿರಿಸಲಾಗಿದೆ. ಹಣವನ್ನು ಸದ್ಬಳಕೆ ಮಾಡಿಕೊಂಡು ಕೆಂಪೇಗೌಡ ವಸ್ತು ಸಂಗ್ರಹಾಲಯವನ್ನು ನಾಲ್ಕು ತಿಂಗಳೊಳಗೆ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರನ್ನು ಬೆಂಗಳೂರಿನ ಎಲ್ಲಾ ಜನ ಸ್ಮರಿಸಬೇಕು ಹಾಗೂ ಎಲ್ಲರಿಗೂ ಕೆಂಪೇಗೌಡರ ಇತಿಹಾಸ ತಿಳಿಸಲು ಸಂಪೂರ್ಣ ಇತಿಹಾಸವನ್ನು ಡಿಜಿಟಲೀಕರಣ ಮಾಡಿ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗುವುದು ಎಂದರು.

ನಾಗರಿಕರ ಬಳಿ ಕೆಂಪೇಗೌಡರ ಕಾಲದ ಶಾಸನ ಮತ್ತಿತರ ಮಾಹಿತಿ ಇದ್ದರೆ ಅದನ್ನು ಬಿಬಿಎಂಪಿಗೆ ತಂದು ಕೊಟ್ಟರೆ ಎಲ್ಲವನ್ನು ಶೇಖರಿಸಿ ಜೋಪಾನ ಮಾಡುತ್ತೇವೆ ಎಂದು ತಿಳಿಸಿದರು. ನಾಲ್ಕು ತಿಂಗಳಲ್ಲಿ ವಸ್ತು ಸಂಗ್ರಹಾಲಯವನು ಸಂಪೂರ್ಣ ಅಭಿವೃದ್ಧಿಪಡಿಸಲು ನೀಲ ನಕ್ಷೆ ಸಿದ್ಧಪಡಿಸುತ್ತೇವೆ. ಇದರ ಜತೆಗೆ ಮೇಯೋ ಹಾಲ್ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಸಂಗೀತ ಕಾರಂಜಿ ಮಾಡಿ ಅದರ ಮುಂಭಾಗ ಓಪನ್ ಥಿಯೇಟರ್ ನಿರ್ಮಿಸುತ್ತೇವೆ. ದೇಶ ವಿದೇಶಗಳಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರು ಥಿಯೇಟರ್‍ನಲ್ಲಿ ಕುಳಿತು ಸಂಗೀತ ಕಾರಂಜಿ ವೀಕ್ಷಿಸಬಹುದಾಗಿದೆ. ಕೆಂಪೇಗೌಡರ ಜೀವನ ಚರಿತ್ರೆ ಕುರಿತು ವೀಡಿಯೋ ಸಿದ್ಧಪಡಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಮಲ್ಲಪ್ಪ ಅವರು ತಮ್ಮ ಬಳಿ ಇರುವ 970 ಗ್ರಾಂ ತೂಕದ ತಾಮ್ರದ ಶಿಲಾಶಾಸನವನ್ನು ಮೇಯರ್ ಅವರಿಗೆ ತೋರಿಸಿದರು.

ಸರ್ಕಾರ ಕೆಂಪೇಗೌಡರ ಕಾಲದ ಶಿಲಾಶಾಸನ ಸಂರಕ್ಷಿಸುತ್ತೇವೆ ಎಂದು ಸರ್ಕಾರಿ ಆದೇಶ ಹೊರಡಿಸಿದರೆ, ಈ ಶಾಸನವನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವುದಾಗಿ ಮರಿಮಲ್ಲಪ್ಪ ಘೋಷಿಸಿದರು.

Facebook Comments

Sri Raghav

Admin