ಇಬ್ಬರ ಜಗಳದಲ್ಲಿ ನಾವು ಲಾಭ ಮಾಡಿಕೊಳ್ಳೋದು ಬೇಡ, ಬಿಜೆಪಿ ನಾಯಕರಿಗೆ ಶಾ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Amit-shah--Yadiyurappa-Yadd

ಬೆಂಗಳೂರು, ಜೂ.26- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತದಲ್ಲಿ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳದೆ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ಅಹಮದಾಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿನ್ನೆ ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ಕರ್ನಾಟಕದ ರಾಜಕೀಯ ಸ್ಥಿತಿಗತಿಗಳನ್ನು ಮನವರಿಕೆ ಮಾಡಿದರು.

ಈ ವೇಳೆ ಅಮಿತ್‍ಶಾ ಕರ್ನಾಟಕದ ರಾಜಕೀಯ ಕುರಿತಂತೆ ಮಾತನಾಡಲು ಹೆಚ್ಚು ಆಸಕ್ತಿ ತೋರದಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಎರಡೂ ಪಕ್ಷಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡದೆ ವಿರೋಧ ಪಕ್ಷವಾಗಿ ರಚನಾತ್ಮಕವಾಗಿ ಕೆಲಸ ಮಾಡಿ ಜನರ ಪ್ರೀತಿ ಪಾತ್ರಗಳಿಸಿರಿ ಎಂದು ಸಲಹೆ ಮಾಡಿದ್ದಾರೆ.
ಒಂದು ವೇಳೆ ನಾವೇನಾದರು ಎರಡು ಪಕ್ಷಗಳ ಭಿನ್ನಮತವನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸಿದರೆ ಕಾಂಗ್ರೆಸ್-ಜೆಡಿಎಸ್ ನಾಳೆ ಒಂದಾಗಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದೆ ಎಂದು ಅಪಪ್ರಚಾರ ನಡೆಸುತ್ತಾರೆ. ಇದರಿಂದ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಮಿತ್ ಶಾ ಅವರು ಯಡಿಯೂರಪ್ಪ ಹಾಗೂ ಅವರ ಜತೆ ಬಂದಿದ್ದ ಆಪ್ತರಿಗೆ ಕಿವಿಮಾತು ಹೇಳಿದ್ದಾರೆ.

ಹಿಂದೆ ಸರ್ಕಾರ ರಚಿಸುವ ಸಂದರ್ಭದಲ್ಲೇ ನಮಗೆ ಆಪರೇಷನ್ ಕಮಲ ಮಾಡಲಾಗುತ್ತದೆ ಎಂಬ ಅಪಪ್ರಚಾರವನ್ನೂ ನಡೆಸಿದ್ದರು. ಈಗ ಅಂತಹ ಒಂದು ಸಣ್ಣ ಪ್ರಯತ್ನ ಮಾಡಿದರೂ ನೇರವಾಗಿ ಎರಡು ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗುವ ಸಾಧ್ಯತೆಗಳಿವೆ. ಬಿಜೆಪಿ ವಿರುದ್ಧ ಈಗಾಗಲೇ ತೃತೀಯ ರಂಗ ಪುಟಿದೆದ್ದಿದೆ. ಇಂತಹ ಸಂದರ್ಭದಲ್ಲಿ ನಾವು ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಕಾದ ಅಗತ್ಯವಿಲ್ಲ ಎಂದು ಶಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್-ಜೆಡಿಎಸ್ ಯಾವುದೇ ಕಾರಣಕ್ಕೂ ಐದು ವರ್ಷ ರಾಜ್ಯದಲ್ಲಿ ಆಡಳಿತವನ್ನು ಪೂರ್ಣಗೊಳಿಸುವುದಿಲ್ಲ. ಈಗಾಗಲೇ ಎರಡು ಪಕ್ಷಗಳ ಮುಖಂಡರು ಹಾದಿ-ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ. ಹೆಚ್ಚೆಂದರೆ ಲೋಕಸಭೆ ಚುನಾವಣೆವರೆಗೂ ಸರ್ಕಾರ ಮುನ್ನಡೆಯಬಹುದು. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಸಾಕಷ್ಟು ಜನಬೆಂಬಲವಿದೆ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಬಂದರೆ ನಮಗೆ ಯಾವುದೇ ಆತಂಕವಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ನಾವು ಹೆಚ್ಚಿನ ಸ್ಥಾನಗಳಿಸಿದ್ದೇವೆ. ಜನ ಬೆಂಬಲ ಬಿಜೆಪಿಗೆ ಇರುವಾಗ ಎರಡು ಪಕ್ಷಗಳು ಕಿತ್ತಾಡಿಕೊಂಡು ಹೊರ ಬರುವವರೆಗೂ ಸರ್ಕಾರ ರಚನೆಯ ಪ್ರಯತ್ನಕ್ಕೆ ಕೈ ಹಾಕಲೇಬಾರದು ಎಂದು ಅಮಿತ್ ಶಾ ಸೂಚಿಸಿದ್ದಾರೆ. ಉಳಿದಂತೆ ಇದೇ 29ರಂದು ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಮತ್ತು ಉಪನಾಯಕ ಸ್ಥಾನವನ್ನು ನಿಮ್ಮಲ್ಲೇ ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಮುಂದಿನ ತಿಂಗಳು ರಾಜ್ಯಕ್ಕೆ ಆಗಮಿಸುವ ವೇಳೆಗೆ 28 ಲೋಕಸಭೆ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವಂತೆ ಅವರು ಸಲಹೆ ಮಾಡಿದ್ದಾರೆ.

Facebook Comments

Sri Raghav

Admin