`ವಾಸ್ತುದೋಷ’ದ ಭಯ, ಸಚಿವರಿಗೆ ಸರ್ಕಾರಿ ಬಂಗಲೆ ಬೇಡ್ವಂತೆ…!

ಈ ಸುದ್ದಿಯನ್ನು ಶೇರ್ ಮಾಡಿ

Anugraha--01

ಬೆಂಗಳೂರು, ಜೂ.26- ಸಾಮಾನ್ಯವಾಗಿ ಹೊಸ ಸರ್ಕಾರ ಬಂದು ಸಚಿವ ಸಂಪುಟ ವಿಸ್ತರಣೆಯಾದ ಮೇಲೆ ಮಂತ್ರಿಗಳು ಆಯಕಟ್ಟಿನಲ್ಲಿ ಮನೆ ಪಡೆಯಲು ಲಾಬಿ ನಡೆಸುವುದು ಸರ್ವೆಸಾಮಾನ್ಯ.  ಆದರೆ, ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು ಒಂದು ಡಜೆನ್‍ಗೂ ಅಧಿಕ ಸಚಿವರು ಸರ್ಕಾರದ ಬಂಗಲೆಯ ಸಹವಾಸ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರದ ಬಂಗಲೆಗಳು ತಮ್ಮ ಇಷ್ಟಕ್ಕೆ ಅನುಗುಣವಾಗಿ ಇಲ್ಲ ಎಂಬ ಕಾರಣ ಹೇಳುತ್ತರಾದರೂ ಸತ್ಯ ಏನೆಂದರೆ ವಾಸ್ತುಭೂತ ಆವರಿಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಒಂದು ಡಜನ್ ಸಚಿವರು ವಾಸ್ತು ಕಾರಣವನ್ನು ಮುಂದಿಟ್ಟು ಸರ್ಕಾರಿ ಬಂಗಲೆಯಿಂದಲೇ ದೂರ ಉಳಿದಿದ್ದಾರೆ.  ಮನೆಗಳನ್ನು ತಮ್ಮಷ್ಟಿಕ್ಕನುಗುಣವಾಗಿ ನವೀಕರಣ ಮಾಡಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದ ನಂತರ ಸಚಿವರು ತಮ್ಮ ತಮ್ಮ ಅಧಿಕೃತ ನಿವಾಸಗಳಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ. ಸಚಿವರಾದ ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಜಮೀರ್ ಅಹಮ್ಮದ್, ಪ್ರಿಯಾಂಕಖರ್ಗೆ ಸೇರಿದಂತೆ 12 ಸಚಿವರು ತಮಗೆ ಸರ್ಕಾರಿ ಬಂಗಲೆ ಬೇಡ, ಕೇವಲ ತಿಂಗಳ ಬಾಡಿಗೆ ನೀಡಿದರೆ ಸಾಕು ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಂಡ್ಸರ್‍ಮ್ಯಾನರ್ ಸಮೀಪದ ಅನುಗ್ರಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಲ್ಲಿ ವಾಸ್ತು ಸರಿಯಿಲ್ಲ ಎಂಬ ದೊಡ್ಡವರೊಬ್ಬರ ಸಲಹೆಯಂತೆ ಸದ್ಯಕ್ಕೆ ಜೆ.ಪಿ.ನಗರದ ತಮ್ಮ ಅಧಿಕೃತ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಳಿಕ ಅರಮನೆ ರಸ್ತೆಯಲ್ಲಿರುವ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರ ನಿವಾಸಕ್ಕೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.

ಆದರೆ, ಸರ್ಕಾರ ಅವರ ಸೇವಾವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಿದ್ದರಿಂದ ಕುಮಾರಸ್ವಾಮಿ ಸದ್ಯಕ್ಕೆ ಜೆ.ಪಿ.ನಗರದ ನಿವಾಸವನ್ನೇ ಖಾಯಂ ಮಾಡಿಕೊಂಡಿದ್ದಾರೆ.  ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೂಡ ಸರ್ಕಾರಿ ಬಂಗಲೆಗೆ ಕಾಲಿಡುವ ಧೈರ್ಯ ಮಾಡಿಲ್ಲ. ಕಾರಣ ಅವರಿಗೂ ಕೂಡ ವಾಸ್ತುದೋಷ ಕಾಡುತ್ತಿದೆ. ಹೀಗಾಗಿ ಬಸವನಗುಡಿಯಲ್ಲಿರುವ ಮನೆಯಲ್ಲೇ ರೇವಣ್ಣ ಉಳಿದಿದ್ದಾರೆ.

ಇದೇ ರೀತಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸದ್ಯಕ್ಕೆ ಸದಾಶಿವನಗರದ ಮನೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದ ಕಾವೇರಿ ನಿವಾಸವನ್ನು ತಮಗೆ ನೀಡಬೇಕೆಂದು ಕೇಳಿಕೊಂಡಿದ್ದರಾದರೂ ಈವರೆಗೂ ನಿಗದಿಯಾಗಿಲ್ಲ. ಸಚಿವರಾದ ಡಿ.ಕೆ.ಶಿವಕುಮಾರ್, ಪ್ರಿಯಾಂಕಖರ್ಗೆ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ತಮಗೆ ಸರ್ಕಾರ ನೀಡುವ ನಿವಾಸಗಳು ಏನಕ್ಕೂ ಸಾಲುವುದಿಲ್ಲ. ಪ್ರತೀ ದಿನ ಕ್ಷೇತ್ರಗಳಿಂದ ತಮ್ಮನ್ನು ಹುಡುಕಿಕೊಂಡು ಸಾವಿರಾರು ಮಂದಿ ಬರುತ್ತಾರೆ. ಅವರ ದೂರು, ದುಮ್ಮಾನಗಳನ್ನು ಆಲಿಸಲು ಈ ಬಂಗಲೆಗಳು ಸರಿ ಹೋಗುವುದಿಲ್ಲ. ಹಾಗಾಗಿ ನಮ್ಮ ಮನೆಗಳೇ ಸೂಕ್ತ ಎಂಬುದು ಬಹುತೇಕರ ವಾದವಾಗಿದೆ.

ವಾಸ್ತವವಾಗಿ ಸಚಿವರು ಸರ್ಕಾರಿ ಬಂಗಲೆಗಳಿಗೆ ಬಾರದಿರುವುದು ವಾಸ್ತುದೋಷವೇ ಕಾರಣ ಎಂಬ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಕೇಳಿ ಬರುತ್ತಿದೆ. ಸಂಪುಟ ದರ್ಜೆಯ ಸಚಿವರಿಗೆ ಬೆಂಗಳೂರಿನಲ್ಲಿ ಒಂದು ಲಕ್ಷ ರೂ. ಮನೆ ಬಾಡಿಗೆ, ಅಡುಗೆಯವರು, ಭದ್ರತಾ ಅಧಿಕಾರಿಗಳು, ವಾಹನದ ಖರ್ಚು ವೆಚ್ಚ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಸರ್ಕಾರಿ ಬಂಗಲೆ ಬೇಡ ಎಂದವರಿಗೆ ಈ ಎಲ್ಲಾ ಸೌಲಭ್ಯಗಳನ್ನು ನಗದು ರೂಪದಲ್ಲಿ ನೀಡುವ ಪರಿಪಾಠವಿದೆ.

Facebook Comments

Sri Raghav

Admin