ಸಮ್ಮಿಶ್ರ ಸರ್ಕಾರದ ಆಯಸ್ಸು ಎರಡೂವರೆ ವರ್ಷ ಮಾತ್ರ : ರಾಯರೆಡ್ಡಿ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Basavaraja-Rayareddy

ಕೊಪ್ಪಳ, ಜೂ.26-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ ಸರ್ಕಾರಕ್ಕೆ ಎರಡೂವರೆ ವರ್ಷ ಏನೂ ಆಗಲ್ಲ. ಕಾಂಗ್ರೆಸ್‍ಗೆ ಅನಿವಾರ್ಯತೆ ಇದೆ. ಕುಮಾರಸ್ವಾಮಿಗೆ ಏನಾಗಬೇಕಾಗಿದೆ ಎಂದು ಹೇಳಿದರು.

ಎರಡೂವರೆ ವರ್ಷ ಆದ ಬಳಿಕ ಕೆಲವರ ಮನೋಭಾವ ಬದಲಾಗಬಹುದು. ಅಕಸ್ಮಾತ್ ಏನೂ ಆಗದೆ ಇದ್ದರೆ ಐದು ವರ್ಷ ಆಡಳಿತ ಎಂದು ಬಸವರಾಜ ರಾಯರೆಡ್ಡಿ ಹೇಳಿದರು. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ನೈತಿಕವಾಗಿ ಬೆಂಬಲ ನೀಡಿದೆ. ಅವರು ಸ್ಪಂದಿಸಬೇಕು. ಇಲ್ಲವಾದಲ್ಲಿ ಅನಿವಾರ್ಯತೆಗಳು ಇದ್ದೇ ಇರುತ್ತವೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಇಂಗ್ಲಿಷ್ ಮಾತನಾಡುವ ಅಗತ್ಯವಿಲ್ಲ. ಅವರು ಕನ್ನಡದಲ್ಲೇ ಮಾತನಾಡಲಿ. ಅವರಿಗೆ ಇಂಗ್ಲಿಷ್ ಬರಲ್ಲ ಅನ್ನೋ ಮಾತು ನನಗೆ ಬಹಳ ಬೇಸರ ತರಿಸಿದೆ. ನಾವೇನು ಇಂಗ್ಲಿಷ್ ಗುಲಾಮರಾ. ಕನ್ನಡ ಮಾತನಾಡಿದರೆ ಕೀಳರಿಮೆ, ಇಂಗ್ಲೀಷ್ ಮಾತನಾಡಿದರೆ ಸುಪೀರಿಯರ್ರಾ. ನಾನು ಜಿ.ಟಿ.ದೇವೇಗೌಡ ಅವರನ್ನು ಬೆಂಬಲಿಸುತ್ತೇನೆ. ಖಾತೆ ನಿರ್ವಹಿಸುವುದು ಮುಖ್ಯ. ಭಾಷೆ ಅಲ್ಲ.

ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಲು ಅವಕಾಶವಿದೆ. ಜಿ.ಟಿ.ದೇವೇಗೌಡರೇನು ಅವಿದ್ಯಾವಂತರಲ್ಲ. ಭಾಷೆ ಒಂದು ಸಮಸ್ಯೆಯೇ ಅಲ್ಲ, ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದು ಮುಖ್ಯ. ಆ ಛಾತಿ ಅವರಿಗಿದೆ.  ವಿದೇಶಿಗರು ಬಂದರೂ ಕೂಡ ಸಚಿವರು ಕನ್ನಡದಲ್ಲೇ ಮಾತನಾಡಲಿ. ಭಾಷೆ ತರ್ಜುಮೆ ಮಾಡುವವರನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

Facebook Comments

Sri Raghav

Admin