ಮಕ್ಕಳ ಭವಿಷ್ಯ ಮುಖ್ಯವೋ… ಜೀವ ಮುಖ್ಯವೋ…?

ಈ ಸುದ್ದಿಯನ್ನು ಶೇರ್ ಮಾಡಿ

school-childs-2

– ಪ್ರಶಾಂತ್‍ಕುಮಾರ್ ಎ.ಪಿ., ಉಪನ್ಯಾಸಕರು

ರಾಜ್ಯದೆಲ್ಲೆಡೆ ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾನ್ವೆಂಟ್‍ಗಳು ಪ್ರಾರಂಭವಾಗಿ ಸುಮಾರು ಒಂದು ತಿಂಗಳು ಆಗುತ್ತಾ ಬರುತ್ತಿದೆ. ತಮ್ಮ ಮಕ್ಕಳು ಉತ್ತಮವಾಗಿ ವಿದ್ಯೆ ಕಲಿತು, ಮುಂದೆ ಸೂಕ್ತ ಉದ್ಯೋಗ ಪಡೆದು, ಅವರವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಂಡು, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕಲೆಂಬುದು ಪೋಷಕರ ಉದ್ದೇಶ.

school-childs

ಮಕ್ಕಳು ಹೆತ್ತವರಿಗೆ ಸಂತೋಷ ಹಾಗೂ ಸಂತೃಪ್ತಿಯನ್ನು ನೀಡುತ್ತಾರೆ. ಇಳಿ ವಯಸ್ಸಿನಲ್ಲಿ ಊರುಗೋಲಿನ ಹಾಗೆ ನೆರವಾಗಿ, ಸಾರ್ಥಕ ಬದುಕನ್ನು ಸಂಪೂರ್ಣಗೊಳಿಸಲು ಕಾರಣವಾಗುತ್ತಾರೆ ಎಂಬುದು ಎಲ್ಲಾ ತಂದೆ-ತಾಯಂದಿರ ಕನಸು ಹಾಗೂ ಆಸೆಯೂ ಕೂಡ. ಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅಪಾರ ಕನಸು ಕಂಡು, ಆ ಸುಂದರ ಕನಸಿನ ನನಸಿಗಾಗಿ ಹಗಲಿರುಳು ಚಿಂತೆ ಮಾಡುತ್ತ, ಕಷ್ಟಪಟ್ಟು ದುಡಿಯುವ ಪೋಷಕರು, ಅದೇ ಮಕ್ಕಳ ಅತ್ಯಮೂಲ್ಯವಾದ ಜೀವದ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ ಅಥವಾ ಇನ್ನೇನು ಧಾವಂತವೂ ಅನ್ನಿಸುತ್ತಿದೆ. ಇದು ದುರದೃಷ್ಟಕರ ಸಂಗತಿ.

school-childs-3

ಈ ಎಲ್ಲ ಪೀಠಿಕೆಯ ಹಿಂದಿರುವ ಬಹು ಮುಖ್ಯ ಕಾರಣವೆಂದರೆ, ಶಾಲೆ-ಕಾನ್ವೆಂಟ್‍ಗಳು ಪ್ರಾರಂಭವಾದ ದಿನದಿಂದಲೂ, ರಜಾ ದಿನಗಳನ್ನು ಹೊರತುಪಡಿಸಿ, ಬೆಳಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಶಾಲಾ ಮತ್ತು ಖಾಸಗಿ ವಾಹನಗಳಲ್ಲಿ ಹಾಗೂ ಆಟೋಗಳಲ್ಲಿ ಚಿಕ್ಕ ಪುಟ್ಟ ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದರೆ ಮನಸ್ಸಿಗಾಗುವ ನೋವು, ಆತಂಕ ಅಷ್ಟಿಷ್ಟಲ್ಲ. ಭವ್ಯ ಭಾರತದ ಭವಿಷ್ಯವನ್ನು ನಿರ್ಮಿಸಬೇಕಾದ ಸಿಂಹಗಳನ್ನು, ಚಿಕ್ಕ ವಯಸ್ಸಿನಲ್ಲಿಯೇ ಕುರಿಗಳನ್ನಾಗಿ ಮಾಡುತ್ತಿರುವುದು ಸರಿಯೇ..?

school-childs-4

ಸಾರ್ವಜನಿಕರು ಸಂಚರಿಸುವ ಯಾವುದೇ ಒಂದು ವಾಹನದಲ್ಲಿ ಇಂತಿಷ್ಟೇ ಜನರನ್ನು ಸಾಗಿಸಬೇಕು ಎಂಬ ಕಟ್ಟುನಿಟ್ಟಿನ ಸಾರಿಗೆ ಮತ್ತು ಸಂಚಾರ ನಿಯಮಗಳಿದ್ದರೂ ಕೂಡ ಅದಾವುದೂ ಸ್ಪಷ್ಟವಾಗಿ ಜಾರಿಗೆ ಬಂದಂತೆ ಕಾಣುತ್ತಿಲ್ಲ, ಪಾಲನೆಯಂತೂ ಮರಿಚಿಕೆಯಾಗಿದೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೂ ಕಟ್ಟುನಿಟ್ಟಿನ ನಿಯಮ ಅತ್ಯಗತ್ಯವಾಗಿದೆ. ಶಾಲೆ ಅಥವಾ ಕಾನ್ವೆಂಟ್‍ಗಳಲ್ಲಿ ಮಕ್ಕಳು ಕಲಿಯಲು ಆಸಕ್ತಿ ಮೂಡಬೇಕೆಂದರೆ ಅವರಿಗೆ ಶಾಲೆಗೆ ಹೋಗಲು ಉತ್ಸಾಹ, ಆಸಕ್ತಿ ಮೂಡಿಸಬೇಕಾದ ಕೆಲಸ ಮೊದಲು ಆಗಬೇಕು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳು ಮನೆಯಿಂದ ಶಾಲೆಗೆ ಖುಷಿಯಿಂದ ಹೊರಟರೂ ಶಾಲೆ ತಲುಪುವ ವೇಳೆಗಾಗಲೇ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿರುತ್ತಾರೆ. ಕಾರಣ, ಅವರು ಶಾಲೆಗೆ ಹೋಗಲು ವ್ಯವಸ್ಥೆ ಮಾಡಿರುವ ವಾಹನಗಳಲ್ಲಿ ಕುಳಿತುಕೊಳ್ಳಲು ಬಹಳ ಇಕ್ಕಟ್ಟಿನ ಪರಿಸ್ಥಿತಿ, ಉಸಿರಾಡಲು ಅಗತ್ಯವಾಗಿರುವ ಗಾಳಿಯ ಕೊರತೆ, ಕೈ-ಕಾಲುಗಳ ಚಲನೆಯಂತೂ ಅಸಾಧ್ಯದ ಮಾತು ಇತ್ಯಾದಿ. ಈ ಎಲ್ಲ ಸಮಸ್ಯೆಗಳ ಜತೆಗೆ ಪುಸ್ತಕ, ನೋಟ್‍ಬುಕ್ ಹಾಗೂ ಇತರೇ ಕಲಿಕಾ ಸಾಮಾಗ್ರಿಗಳಿಂದ ತಂಬಿದ ಮಣಭಾರದ ಬ್ಯಾಗ್.

ಕಳೆದ ಹಲವು ವರ್ಷಗಳಿಂದ ನಮ್ಮ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಲ್ಲಿ, ಅಗತ್ಯಕ್ಕಿಂತ ಹೆಚ್ಚಾಗಿ ಮಕ್ಕಳನ್ನು ತುಂಬಿಕೊಂಡು ಶಾಲೆಗೆ ಕರೆದೊಯ್ಯುವ ಹಲವು ಶಾಲಾ ಹಾಗೂ ಖಾಸಗಿ ವಾಹನಗಳಾದ ಜೀಪ್, ಓಮ್ನಿಯಂತಹ ಕಾರುಗಳು, ಆಟೋಗಳು ಭೀಕರ ಅಪಘಾತಕ್ಕೀಡಾಗಿರುವುದನ್ನು ನಾವೆಲ್ಲ ಕೇಳಿರುತ್ತೇವೆ. ಈ ರೀತಿಯ ಅಪಘಾತಗಳಿಂದಾಗಿ ಅಮೂಲ್ಯವಾದ ನಮ್ಮ ಮಕ್ಕಳ ಜೀವ ಏನೂ ಅರಿಯದ ಚಿಕ್ಕ ವಯಸ್ಸಿನಲ್ಲಿಯೇ ಕಮರಿ ಹೋಗುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಎಷ್ಟೋ ಮಕ್ಕಳು ಗಂಭೀರವಾಗಿ ಗಾಯಗೊಂಡು ಶಾಶ್ವತವಾಗಿ ದೈಹಿಕ ಅಂಗವಿಕಲರಾಗಿರುವುದನ್ನು ನೋಡಿರುತ್ತೇವೆ. ಏಕೆಂದರೆ, ಅಪಘಾತವಾದ ಸಂದರ್ಭದಲ್ಲಿ ಮಕ್ಕಳಿಗೆ ತಪ್ಪಿಸಿಕೊಂಡು ಹೊರಗೆ ಬರಲು ಆಗದಷ್ಟು ಇಕ್ಕಟ್ಟಿನ ಹಿಂಸೆಯ ಪರಿಸ್ಥಿತಿ ವಾಹನದೊಳಗೆ ಇರುತ್ತದೆ. ಭವ್ಯ ಭಾರತದ ಭಾವಿ ಪ್ರಜೆಗಳ ಪರಿಸ್ಥಿತಿ, ಎಳೆಯ ವಯಸ್ಸಿನಲ್ಲಿಯೇ ಬಾವಿಗೆ ಬಿದ್ದಂತಾಗುತ್ತದೆ.

school-childs-12

 

ಪ್ರತೀ ವರ್ಷ ದೇಶದಲ್ಲಿ ಒಂದಲ್ಲ ಒಂದು ಕಡೆ ಇಂತಹ ಅನಾಹುತಗಳು ಸಂಭವಿಸುತ್ತಿದ್ದರೂ, ದುಸ್ಥಿತಿ ಕಣ್ಣಿಗೆ ಕಂಡರೂ ಪೋಷಕರು ಮಾತ್ರ ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಬಿದ್ದಂತೆ ವರ್ತಿಸುತ್ತಿರುವುದು ವಿಷಾದನೀಯ ಸಂಗತಿ. ಚಿಕ್ಕ ಮಕ್ಕಳು ಸುಂದರ ಸುಕೋಮಲ ಹೂವುಗಳಿದ್ದಂತೆ. ಅವುಗಳು ಅರಳುವ ಮುನ್ನವೇ ಬಾಡಿ ಹೋಗುವ ಹಾಗೆ ಮಾಡುವುದು ನ್ಯಾಯವೇ..?  ಹಾಗಾದರೆ ಇಂತಹ ಭೀಕರ ಪರಿಸ್ಥಿತಿಗಳಿಂದ ಅನಾಹುತಗಳಿಂದ ಹೊರಬರಲು ಸಾಧ್ಯವಿಲ್ಲವೆ..? ಖಂಡಿತಾ ಇದೆ. ಅದು ಹೇಗೆಂದರೆ, ಶಾಲೆಗಳು ಮನೆಯ ಹತ್ತಿರವಿದ್ದರೆ, ಇತರೆ ವಾಹನಗಳನ್ನು ಅವಲಂಬಿಸುವ ಬದಲು ಸ್ವಲ್ಪ ಬಿಡುವು ಮಾಡಿಕೊಂಡು ಕಾಲ್ನಡಿಗೆಯಲ್ಲಿಯೇ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಬಿಡುವ ಪದ್ಧತಿಯನ್ನು ರೂಢಿಸಿಕೊಳ್ಳುವುದು. ಮಿತಿ ಮೀರಿದ ಸಂಖ್ಯೆಯ ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯುತ್ತಿದ್ದರೆ, ಅಂತಹ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳುಹಿಸದಿದ್ದರೆ ಒಳಿತು. ಇದರೊಂದಿಗೆ, ಆ ವಾಹನಗಳಿಗೆ ಸಂಬಂಧಿಸಿದ ಚಾಲಕ ಅಥವಾ ಶಾಲಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರಲ್ಲಿ ಮುಂದಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುವುದು. ಒಂದು ವೇಳೆ ಶಾಲೆ ಮನೆಯಿಂದ ದೂರವಿದ್ದರೆ, ಬೆಳಗ್ಗೆ ಹಾಗೂ ಸಂಜೆ ಅಲ್ಪ ಬಿಡುವು ಮಾಡಿಕೊಂಡು ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ತಾವೇ ಖುದ್ದಾಗಿ ಮಕ್ಕಳನ್ನು ಬಿಡಲು ಹಾಗೂ ಕರೆದುಕೊಂಡು ಬರಲು ದೃಢ ನಿಶ್ಚಯಿಸಿಕೊಳ್ಳುವುದು.ಇದು  ಮಕ್ಕಳಲ್ಲಿ ಪೋಷಕರು ತಮ್ಮ ಬಗ್ಗೆ ತೆಗೆದು ಕೊಳ್ಳುತ್ತಿರುವ ಕಾಳಜಿಯ ಬಗ್ಗೆ ಆತ್ಮಾಭಿಮಾನ ಮತ್ತು ಪ್ರೀತಿ ಮೂಡುತ್ತದೆ. ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸುಮಧುರ ಸಂಬಂಧ ಗಟ್ಟಿಯಾಗಿ ನೆಲೆಯೂರಲು ಕಾರಣವಾಗುತ್ತದೆ.

ಪೋಷಕರೇ, ಮಕ್ಕಳು ದೇವರಿಗೆ ಸಮ. ಅವರು ಬೆಳೆದು ಪ್ರೌಢಾವಸ್ಥೆ ತಲುಪುವವರೆಗೂ ಅವರ ಬೇಕು-ಬೇಡಗಳು ಹಾಗೂ ಜೀವದ ಬಗ್ಗೆ ನಾವು ಕಾಳಜಿ ಮಾಡಿದ್ದೇ ಆದಲ್ಲಿ, ಅದುವೇ ನಾವು ದೇವರಿಗೆ ಸಲ್ಲಿಸುವ ನಿಜವಾದ ಸೇವೆ ಹಾಗೂ ಪೂಜೆ. ಇಂತಹ ಭಕ್ತಿಗೆ ಹೇಗೆ ದೇವರು ಪ್ರಸನ್ನವಾಗಿ ವರ ಕೊಡಬಲ್ಲವನೋ, ಹಾಗೆಯೇ ನಮ್ಮ ಮಕ್ಕಳಿಗೆ ನಾವು ಅವರ ಎಳೆಯವಯಸ್ಸಿನಲ್ಲಿ ತೋರಿಸುವ ಪ್ರೀತಿ, ಕಾಳಜಿ, ತ್ಯಾಗದಿಂದಾಗಿ ಅವರು ದೊಡ್ಡವರಾದ ಮೇಲೆ, ಇಳಿ ವಯಸ್ಸಿನ ತಂದೆ-ತಾಯಿಯರನ್ನು ಕೂಡ ಅಷ್ಟೇ ಪ್ರೀತಿ-ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಹೀಗೆ ಹೇಳಿದ್ದಾರೆ. ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಪ್ರಸ್ತುತ ಸನ್ನಿವೇಶಕ್ಕೆ ಈ ಮುತ್ತಿನಂತಹ ಮಾತು ನೂರಕ್ಕೆ ನೂರರಷ್ಟು ಹೋಲಿಕೆಯಾಗುತ್ತದೆ. ಏಕೆಂದರೆ, ನಮ್ಮ ಮಕ್ಕಳಿಗಾಗಿ ನಾವು ಹಗಲಿರುಳು ದುಡಿದು ಕೂಡಿ ಇಡುತ್ತಿರುವ ಹಣ, ಆಸ್ತಿ ಕಳೆದು ಹೋದರೆ ಮತ್ತೊಮ್ಮೆ ಸಂಪಾದಿಸಬಹುದು. ಆದರೆ, ನಮ್ಮ ಮಕ್ಕಳ ಜೀವವೇ ಹೋದರೆ ಮತ್ತೊಮ್ಮೆ ಮರುಜೀವ ಬರಲು ಸಾಧ್ಯವೇ..? ಆ ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆಯೇ ಯೋಚಿಸಿ..?

ಹಾಗಾಗಿ, ನಮ್ಮಗಳ ಬಿಡುವಿಲ್ಲದ ಕೆಲಸಗಳ ನಡುವೆಯೂ ನಮ್ಮ ಮಕ್ಕಳ ಮನಸ್ಸನ್ನು ಸಂತೋಷ ಪಡಿಸಲು ಮುಂದೆ ಹೆತ್ತವರ ಬಗ್ಗೆ ಒಲವು ಮೂಡಲು ಅಗತ್ಯವಿರುವ ಕಾಳಜಿಯನ್ನು ಎಳೆಯ ವಯಸ್ಸಿನಲ್ಲಿಯೇ ತೋರೋಣ.  ಏನೂ ಅರಿಯದ ನಿಮ್ಮ ಪುಟ್ಟ ಮಕ್ಕಳ ಜೀವವನ್ನು ಕಾಪಾಡಿ. ಅವರ ಜೀವ ಮತ್ತು ಸುಂದರ ಭವಿಷ್ಯ ನಿಮ್ಮಗಳ ಕೈಯಲ್ಲಿದೆ. ನಮ್ಮಗಳ ಬೇಜವಾಬ್ದಾರಿತನ, ಅಸಡ್ಡೆ, ದುರಾಸೆ, ಸಂಸಾರದ ಜಂಜಾಟದಲ್ಲಿ ನಮ್ಮ ಪ್ರೀತಿಯ ಮಕ್ಕಳ ಜೀವ ಬಲಿಯಾಗದಿರಲಿ. ಭವಿಷ್ಯದ ರಾಷ್ಟ್ರ ನಿರ್ಮಾಪಕರುಗಳನ್ನು ಅತ್ಯಂತ ಜತನದಿಂದ ಜೋಪಾನವಾಗಿ ಕಾಪಾಡುವ ಜವಾಬ್ದಾರಿ ಎಲ್ಲ ಪೋಷಕರುಗಳದ್ದಾಗಲಿ.
ಮಕ್ಕಳೆಂಬ ಅರಳುವ ಸುಂದರ ಹೂಗಳು, ಮುಂದೊಂದು ದಿನ ತಮ್ಮ ಸಾಧನೆ ಎಂಬ ಕಂಪಿನಿಂದ ಇಡೀ ಜಗತ್ತಿಗೆ ಪಸರಿಸಿ, ಇದಕ್ಕೆ ಕಾರಣರಾದ ತಂದೆ-ತಾಯಿಗಳಿಗೆ ಕೀರ್ತಿ, ಗೌರವಗಳನ್ನು ತಂದುಕೊಡುತ್ತಾರೆ. ಹೆತ್ತ ತಂದೆ-ತಾಯಿಗಳಿಗೆ ಇದಕ್ಕಿಂತ ಸಂತೋಷ ತಂದುಕೊಡುವ ಮತ್ತು ಮರೆಯಲಾಗದ ಕ್ಷಣ ಖಂಡಿತ ಎಂದೂ ಸಿಗಲಾರದು ಎಂಬುದು ನನ್ನ ಅನಿಸಿಕೆ ಏನಂತೀರಾ..?

Facebook Comments

Sri Raghav

Admin