ಮೇಲ್ಮನೆ ಪ್ರಮುಖ ಮೂರು ಸ್ಥಾನಗಳನ್ನು ತುಂಬಲು 3 ಪಕ್ಷಗಳಿಗೂ ತಲೆನೋವು

ಈ ಸುದ್ದಿಯನ್ನು ಶೇರ್ ಮಾಡಿ

BJI-JDS-Congress
ಬೆಂಗಳೂರು, ಜೂ.26- ವಿಧಾನ ಪರಿಷತ್‍ನ ಮೂರು ಪ್ರಮುಖ ಸ್ಥಾನಗಳಿಗೆ ಮೂರೂ ಪಕ್ಷಗಳಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಮೂರು ಸ್ಥಾನಗಳು ತಲಾ ಒಂದೊಂದು ಪಕ್ಷಕ್ಕೆ ಸಿಗಲಿದ್ದು, ಅಸಮಾಧಾನದ ಹೊಗೆಯಾಡದಂತೆ ನೇಮಕ ಮಾಡುವುದೇ ಪಕ್ಷಗಳಿಗೆ ದೊಡ್ಡ ತಲೆ ಬಿಸಿಯಾಗಿದೆ.  ವಿಧಾನ ಪರಿಷತ್‍ನಲ್ಲಿ ಸಭಾಪತಿ, ಸಭಾನಾಯಕ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಖಾಲಿ ಇವೆ. ಡಿ.ಹೆಚ್. ಶಂಕರಮೂರ್ತಿ ನಿವೃತ್ತಿಯಿಂದ ಖಾಲಿಯಾದ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯನ್ನಾಗಿ ಜೆಡಿಎಸ್‍ನ ಬಸವರಾಜ ಹೊರಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಆದರೆ ಒಲ್ಲದ ಮನಸ್ಸಿನಿಂದಲೇ ಹಂಗಾಮಿ ಸಭಾಪತಿ ಯಾಗಿರುವ ಹೊರಟ್ಟಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾರಣ ಸಭಾಪತಿ ಸ್ಥಾನ ವಹಿಸಿಕೊಳ್ಳುವುದು ಅನುಮಾನವಾಗಿದೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರದ ಒಪ್ಪಂದದ ಅನ್ವಯ ವಿಧಾನಸಭೆ ಸ್ಪೀಕರ್ ಸ್ಥಾನ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ವಿಧಾನ ಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‍ಗೆ ಎಂದಾಗಿದೆ.  ಹೀಗಾಗಿ ಜೆಡಿಎಸ್ ಸಚಿವ ಸ್ಥಾನ ವಂಚಿತ ಹೊರಟ್ಟಿ ನೇಮಕ್ಕೆ ಮುಂದಾಗಿ ಹಂಗಾಮಿ ಸಭಾಪತಿಯಾಗಿ ನೇಮಿಸಿದೆ. ಆದರೂ ಹೊರಟ್ಟಿ ಕಣ್ಣು ಸಚಿವ ಸ್ಥಾನದ ಮೇಲಿದ್ದು, ಸಭಾಪತಿ ಸ್ಥಾನ ನಿರಾಕರಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನ ನಿರಾಕರಿಸಿದರೆ ಆ ಸ್ಥಾನವನ್ನೂ ತಮಗೆ ನೀಡಬೇಕು ಎಂದು ಕಾಂಗ್ರೆಸ್ ಹೊಸ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೆ ನಿರಾಶರಾಗಿರುವ ಎಸ್.ಆರ್.ಪಾಟೀಲ್ ಅವರಿಗೆ ಸಭಾಪತಿ ಸ್ಥಾನ ನೀಡಿ ಸಮಾಧಾನಪಡಿಸುವ ಯತ್ನ ನಡೆಸುತ್ತಿದೆ.

ಇನ್ನು ಸಭಾನಾಯಕ ಸ್ಥಾನ ಕಾಂಗ್ರೆಸ್‍ಗೆ ಲಭಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಭಿನ್ನಮತ ಸೃಷ್ಠಿಯ ಸುಳಿವು ನೀಡಿದೆ. ಈಗಾಗಲೇ ಪರಿಷತ್ ಸದಸ್ಯೆ ಜಯಮಾಲ ಸಚಿವೆಯಾಗಿದ್ದು, ಸಹಜವಾಗಿ ಸಚಿವರು ಸಭಾನಾಯಕರಾಗುವ ಕಾರಣ ಅವರಿಗೆ ಸಭಾನಾಯಕಿ ಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಜಯಮಾಲಾ ಪರಿಷತ್ ಅನ್ನು ನಿರ್ವಹಿಸುವುದು ಕಷ್ಟ. ಹಾಗಾಗಿ ಅವರಿಗೆ ಸಭಾ ನಾಯಕಿ ಸ್ಥಾನ ನೀಡಬಾರದು ಎಂದು ಈಗಾಗಲೇ ಕಾಂಗ್ರೆಸ್ ನಾಯಕರಿಂದ ಸಹಿ ಸಂಗ್ರಹ ಶುರುವಾಗಿದೆ.

ಸಭಾನಾಯಕ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ, ವಿ.ಎಸ್.ಉಗ್ರಪ್ಪ, ಆರ್.ಬಿ.ತಿಮ್ಮಾಪುರ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಸಚಿವ ಸ್ಥಾನವೂ ಸಿಗುವ ಕಾರಣ ಜಯಮಾಲಾಗೆ ಪಟ್ಟ ಬೇಡ ಎನ್ನುತ್ತಾ ಪಟ್ಟಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಆಡಳಿತಾರೂಢ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಕಥೆ ಇದಾದರೆ, ಪ್ರತಿಪಕ್ಷ ಬಿಜೆಪಿಯದ್ದು ಮತ್ತೊಂದು ಕಥೆ. ಕೆ.ಎಸ್. ಈಶ್ವರಪ್ಪ ಶಾಸಕರಾಗಿ ಆಯ್ಕೆಯಾದ ಕಾರಣ ಅವರಿಂದ ತೆರವಾಗಿ ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ಬಿಜೆಪಿಯಲ್ಲೂ ತೀವ್ರ ಪೈಪೋಟಿ ಶುರುವಾಗಿದೆ. ಎನ್.ವೈ.ನಾರಾಯಣಸ್ವಾಮಿ, ಆಯನೂರು ಮಂಜುನಾಥ್, ಕೋಟಾ ಶ್ರೀನಿವಾಸ ಪೂಜಾರಿ, ರಘುನಾಥ ಮಲ್ಕಾಪುರೆ ರೇಸ್‍ನಲ್ಲಿದ್ದಾರೆ.

ಪೂಜಾರಿ ಹಾಗೂ ಮಲ್ಕಾಪುರೆ ಹಿರಿತನದ ಆಧಾರದಲ್ಲಿ ಲಾಬಿ ನಡೆಸುತ್ತಿದ್ದರೆ, ಆಯನೂರು ಮಂಜುನಾಥ್ ಯಡಿಯೂರಪ್ಪ ಕೃಪೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಈಶ್ವರಪ್ಪ ವಿರುದ್ಧ ಆಯನೂರಿಗೆ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಆದರೆ ನಾರಾಯಣಸ್ವಾಮಿ ಸದಾನಂದ ಗೌಡರ ಬೆಂಬಲ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದ್ದು, ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಭಾಪತಿ, ಆಡಳಿತ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಕಾರಣ ಮೂರೂ ಪಕ್ಷಗಳಲ್ಲಿ ಈ ಸ್ಥಾನಗಳಿಗೆ ತೀವ್ರ ಪೈಪೆÇೀಟಿ ಹಾಗೂ ಲಾಬಿ ನಡೆಯುತ್ತಿದೆ ಎನ್ನಲಾಗುತ್ತಿದೆ.

Facebook Comments

Sri Raghav

Admin