ತುರ್ತು ಪರಿಸ್ಥಿತಿ ವೇಳೆ ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

DH-Shankaramuty--01
ಬೆಂಗಳೂರು, ಜೂ.26-ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿತ್ತು ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು. ಬಾಬುರಾವ್ ದೇಶಪಾಂಡೆ ಭವನದಲ್ಲಿಂದು ತುರ್ತು ಪರಿಸ್ಥಿತಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಮಾತನಾಡಿದರು. ಇಂದಿರಾಗಾಂಧಿ ವಿರುದ್ಧ ನ್ಯಾಯಾಲಯ ತೀರ್ಪು ನೀಡಿತು ಎಂಬ ಕಾರಣಕ್ಕೆ ದೇಶದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದರಿಂದ ಪತ್ರಿಕಾರಂಗ ಸೇರಿದಂತೆ ಎಲ್ಲರಿಗೂ ಸ್ವಾತಂತ್ರ್ಯ ಇಲ್ಲದಂತಾಯಿತು ಎಂದರು. ತುರ್ತು ಪರಿಸ್ಥಿತಿ ವಿರೋಧಿಸಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ಜಯಪ್ರಕಾಶ್ ನಾರಾಯಣ್ ಬೀದಿಗಿಳಿದು ಹೋರಾಟ ಮಾಡಿದಾಗ ವಾಜಪೇಯಿ ಹಾಗೂ ಅಡ್ವಾಣಿಯವರನ್ನು ಬೆಂಗಳೂರಿನ ಜೈಲಿಗೆ ತಂದು ಹಾಕಲಾಯಿತು.

ಆ ಸಂದರ್ಭದಲ್ಲಿ ಹೋರಾಟ ಮಾಡಿದ ನಾನು ಬಂಧಿತನಾಗಿ ವಾಜಪೇಯಿ, ಅಡ್ವಾಣಿಯವರೊಂದಿಗೆ ಇರುವ ಸೌಭಾಗ್ಯ ಸಿಕ್ಕಿತ್ತು. ದೇಶಭಕ್ತಿ, ಸ್ವಾತಂತ್ರ್ಯ, ರಾಜಕೀಯ ವಿಷಯಗಳ ಬಗ್ಗೆ ನನಗೆ ಅಪಾರ ಆಸಕ್ತಿ ಬೆಳೆಯಿತು ಎಂದು ಸ್ಮರಿಸಿದರು. ಅಂದು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದವರೇ ಇಂದು ದೇಶದಲ್ಲಿ ಅಘೋಷಿತ ಪರಿಸ್ಥಿತಿ ಇದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಪತ್ರಿಕೆಗಳು ಸ್ವತಂತ್ರವಾಗಿ ಬರೆಯುವ ಅವಕಾಶ ಇರಲಿಲ್ಲ. ಏನು ಬರೆದರೂ ಮೇಲಿನವರು ನೋಡಿ ಸರ್ಕಾರದ ವಿರುದ್ಧ ಬರಹವಿಲ್ಲದಿದ್ದರೆ ಮುದ್ರಣಕ್ಕೆ ಕಳುಹಿಸಬೇಕಾಗಿತ್ತು. ಸಾರ್ವಜನಿಕರಿಗೂ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ಅಂತಹ ಕೆಟ್ಟ ಪರಿಸ್ಥಿತಿ ಇತ್ತು ಎಂದು ಶಂಕರಮೂರ್ತಿ ಹೇಳಿದರು
ಮಾಜಿ ವಿಧಾನಪರಿಷತ್ ಸದಸ್ಯ ಕೃಷ್ಣಭಟ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin