ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 11,000 ಕೋಟಿ ರೂ. ಸಾಲ ಮನ್ನಾಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM
ಬೆಂಗಳೂರು, ಜೂ.26- ಸಹಕಾರಿ ಬ್ಯಾಂಕ್‍ಗಳಲ್ಲಿರುವ ರೈತರ 11,000 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಹಕಾರಿ ಬ್ಯಾಂಕ್‍ಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರ ಜೊತೆ ವಿಧಾನಸೌಧದಲ್ಲಿ ನಿನ್ನೆಯಷ್ಟೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಭೆ ನಡೆಸಿ ಮಾತುಕತೆ ನಡೆಸಿದ್ದರು.
ಸಭೆ ಬಳಿಕ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ರೈತರ ಸಾಲಮನ್ನಾವನ್ನು ಎರಡು ಹಂತಗಳಲ್ಲಿ ಮಾಡುವ ಬಗ್ಗೆ ಸುಳಿವು ನೀಡಿದ್ದರು.

ಸಾಲಮನ್ನಾ ವಿಚಾರದಲ್ಲಿ ಅಧಿಕಾರಿಗಳ ಮತ್ತು ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ರೈತರಿಗೆ ಸಿಹಿ ಸುದ್ದಿ ನೀಡಲಿದ್ದಾರೆಂದು ಹೇಳಿದ್ದರು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳ ಸಾಲಮನ್ನಾ ಆಗಲಿದೆ. ಬೆಳೆ ಸಾಲವನ್ನು ಮಾತ್ರ ಮೊದಲಿಗೆ ಮನ್ನಾ ಮಾಡಲಾಗುತ್ತದೆ. ಬೆಳೆ ಸಾಲದ ವಿಚಾರದಲ್ಲಿ ಸಣ್ಣ ರೈತರು ಮಾತ್ರವಲ್ಲದೇ, ಎಲ್ಲಾ ರೈತರ ಸಾಲಮನ್ನಾ ಮಾಡಲಾಗುವುದು. ಎರಡನೇ ಹಂತದಲ್ಲಿ ಕೃಷಿ ಉಪಕರಣಗಳ ಖರೀದಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದರು.

ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡುವಂತಹ ಮತ್ತು ರೈತ ಸಮೂಹಕ್ಕೆ ಲಾಭವಾಗುವಂತಹ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಿಂದಿನ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿನ 50,000 ರೂ.ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಿದೆ. ಇದರ ಮೊತ್ತವತು 8 ಸಾವಿರ ಕೋಟಿಗಿಂತ ಅಧಿಕವಾಗಿದೆ. ಮತ್ತೊಮ್ಮೆ ಸಾಲ ಮನ್ನಾ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ 10,000 ಕೋಟಿ ಹೊರೆ ಬೀಳಲಿದೆ. ಮುಂದಿನ ಮಾರ್ಚ್ ಅಂತ್ಯದವರೆಗೆ ಸಾಲಮನ್ನಾ ಮಾಡಬೇಕು ಎಂಬ ಒತ್ತಾಯವಿದೆ. ಇದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರಾಜ್ಯದ ರೈತರು ಪಡೆದಿರುವ ಬೆಳೆ ಸಾಲದ ವಿವಗಳನ್ನು ಕಲೆ ಹಾಕಬೇಕಾಗಿದೆ ಎಂದು ಹೇಳಿದ್ದರು.

Facebook Comments

Sri Raghav

Admin