ಕಾಂಗ್ರೆಸ್’ನೊಳಗೆ ಕಿರಿಕ್, ಹೈಕಮಾಂಡ್‍ಗೆ ತಲೆನೋವು

ಈ ಸುದ್ದಿಯನ್ನು ಶೇರ್ ಮಾಡಿ

Congress-Siddaramaiah--Rahu

ಬೆಂಗಳೂರು, ಜೂ.26- ಕಾಂಗ್ರೆಸ್ ಹೈಕಮಾಂಡ್‍ಗೆ ಭಿನ್ನಮತದ ತಲೆ ಬಿಸಿ ಮತ್ತೆ ಶುರುವಾಗಿದೆ. ಸರ್ಕಾರ ರಚನೆಯಾದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಹೈಕಮಾಂಡ್‍ಗೆ ಕಾಡುತ್ತಲೇ ಇವೆ. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಬಜೆಟ್ ಬಗ್ಗೆ ತಮ್ಮ ಆಪ್ತರ ಬಳಿ ಎತ್ತಿದ ಆಕ್ಷೇಪ ಹೊಸ ತಲೆನೋವಾಗಿ ಪರಿಣಮಿಸಿದೆ.

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಮಾಡಲು ಹೈಕಮಾಂಡ್ ಮುಂದಾಗಿತ್ತು. ಈ ಬೆನ್ನಲ್ಲೇ ದೋಸ್ತಿ ಸರ್ಕಾರದಲ್ಲಿ ಹೊಸ ಕುಸ್ತಿ ಶುರುವಾಗಿದೆ. ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ವಾಕ್ಸಮರ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ತೀವ್ರ ನಿಗಾ ವಹಿಸಿದ್ದು, ಸಂಪೂರ್ಣ ಮಾಹಿತಿ ಕೇಳಿದೆ.

ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಮಾಹಿತಿ ಕೇಳಿದ್ದು, ಸಚಿವ ಕೃಷ್ಣಭೈರೇಗೌಡ ಅವರು ಇಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದೆರಡು ದಿನಗಳ ಹಿಂದೆ ಹಲವು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಬಗ್ಗೆ ಪ್ರಸ್ತಾಪಿಸಿದ ವಿಷಯ, ಸಾಲ ಮನ್ನಾ ಕುರಿತು ಆಡಿದ ಮಾತುಗಳು, ಪರಮೇಶ್ವರ್ ಅವರ ಭೇಟಿ, ನಿಗಮ-ಮಂಡಳಿಗಳ ನೇಮಕ, ಸಂಪುಟ ವಿಸ್ತರಣೆ ವಿಷಯದ ಬಗ್ಗೆ ಚರ್ಚೆ, ನಂತರ ಮಾಧ್ಯಮಗಳಲ್ಲಿ ಈ ವಿಷಯ ಬಹಿರಂಗವಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕುಂಟಾಗಿರುವುದು ಈ ಎಲ್ಲ ವಿಷಯಗಳು ಎಲ್ಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವುದು ಕಾಂಗ್ರೆಸ್ ಹೈಕಮಾಂಡ್‍ಗೆ ತಲೆನೋವಾಗಿ ಪರಿಣಮಿಸಿದೆ.ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ತಲೆನೋವು ಪ್ರಾರಂಭವಾಗಿರುವುದು ಹೈಕಮಾಂಡ್‍ಗೆ ಒಂದು ರೀತಿ ಕಿರಿಕಿರಿ ಉಂಟಾಗಿದೆ.

ಕಾಂಗ್ರೆಸ್-ಜೆಡಿಎಸ್ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಅಹಮದಾಬಾದ್‍ಗೆ ಕರೆಸಿಕೊಂಡು ಪ್ರತ್ಯೇಕ ಮಾತುಕತೆ ನಡೆಸಿರುವುದು ಕೂಡ ಕಾಂಗ್ರೆಸ್ ಹೈಕಮಾಂಡ್‍ಗೆ ಶಾಕ್ ಆಗಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸುಗಮವಾಗಿ ನಡೆಯುವಂತೆ ಮಾಡಬೇಕಾಗಿದೆ. ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗುತ್ತಿರುವ ತಾಪತ್ರಯಗಳನ್ನು ಸರಿಮಾಡಬೇಕಾಗಿದೆ. ಸರ್ಕಾರ ರಚನೆಯಾದಾಗಿನಿಂದಲೂ ಇಂದಿನವರೆಗೂ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ. ಹಾಗಾಗಿ ಇತ್ತೀಚೆಗೆ ನಡೆದ ಎಲ್ಲ ಬೆಳವಣಿಗೆಗಳ ಮಾಹಿತಿಯನ್ನು ರವಾನಿಸುವಂತೆ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಎಲ್ಲ ಮಾಹಿತಿಯನ್ನೂ ಹೈಕಮಾಂಡ್‍ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕವನ್ನು ಹೈಕಮಾಂಡ್ ಮಾಡಲಿದೆ ಎಂದು ತಿಳಿದುಬಂದಿದೆ. ಈ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೆ ವಹಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಪ್ರತಿಷ್ಠೆಗಳನ್ನು ಬದಿಗಿಟ್ಟು ಕೆಲಸ ಮಾಡಬೇಕೆಂಬ ಸಂದೇಶವನ್ನು ರವಾನಿಸಿದೆ.

Facebook Comments

Sri Raghav

Admin