ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೀಲಮಣಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Neelamani

ಬೆಂಗಳೂರು, ಜೂ.26- ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುವವರ ಮತ್ತು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿಜಿಪಿ ನೀಲಮಣಿ ಎನ್.ರಾಜು ಸೂಚನೆ ನೀಡಿದರು.  ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ವಿಶ್ವಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ಏರ್ಪಡಿಸಲಾಗಿದ್ದ ವಿಚಾರಸಂಕಿರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕ ವ್ಯಸನಕ್ಕೆ ಬಲಿಯಾದವರು ಬಹುತೇಕ ಸತ್ತಂತೆ ಬದುಕುತ್ತಿರುತ್ತಾರೆ. ಅವರನ್ನು ಮತ್ತೊಂದು ಬಾರಿ ಬಂಧಿಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವುದರಿಂದ ಎರಡನೇ ಬಾರಿ ಸಾಯಿಸಿಂದಂತಾಗುತ್ತದೆ. ಅದಕ್ಕಿಂತಲೂ ಪ್ರಮುಖವಾಗಿ ಪೊಲೀಸರು ಮಾದಕ ವಸ್ತುಗಳನ್ನು ಸರಬರಾಜು ಮಾಡುವವರು ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಸ್ಟೇಲ್, ಶಾಲಾ-ಕಾಲೇಜು, ಪಿಜಿ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಡ್ರಗ್ಸ್ ಮಾರಾಟ ಮಾಡುವವರ ದಂಧೆ ಮೇಲೆ ನಿಗಾ ವಹಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುವಿಗೆ ಸಂಬಂಧಪಟ್ಟ ಅಪರಾಧಗಳು ದುಪ್ಪಟ್ಟಾಗಿವೆ. ವಿದ್ಯಾರ್ಥಿ ಮತ್ತು ಯುವ ಸಮುದಾಯವನ್ನು ಈ ಚಟಗಳಿಂದ ದೂರ ಇಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ರಾಜ್ಯದ ಗಡಿಭಾಗದಿಂದ ಪ್ರವಾಸಿಗರ ವೇಷದಲ್ಲಿ ವಿಮಾನ ನಿಲ್ದಾಣಗಳ ಮೂಲಕ ಹಾಗೂ ಇನ್ನಿತರ ಅಕ್ರಮ ಮಾರ್ಗಗಳಿಂದ ಮಾದಕ ವಸ್ತು ಸರಬರಾಜಾಗುತ್ತಿದೆ. ಇದನ್ನು ಮಟ್ಟ ಹಾಕಬೇಕು ಎಂದು ತಿಳಿಸಿದರು. ಮಾದಕ ವಸ್ತು ಚಟಕ್ಕೆ ಬಲಿಯಾದವರಿಗೆ ಚಿಕಿತ್ಸೆ ನೀಡಲು ದುಶ್ಚಟ ಮುಕ್ತ ಕೇಂದ್ರಗಳು ಸಾಕಷ್ಟು ಇವೆ. ಒಂದು ವೇಳೆ ಅವುಗಳ ಪ್ರಮಾಣ ಕಡಿಮೆ ಇದೆ ಎನಿಸಿದರೆ ಮತ್ತು ಅವುಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ಬಗ್ಗೆ ನಿಮ್ಮ ಸಲಹೆಗಳಿದ್ದರೆ ಕಾರ್ಯಾಗಾರದಲ್ಲಿ ನೀಡಿ. ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಪುನರ್ ವಸತಿಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾದಕ ವಸ್ತುಗಳು ವಿದ್ಯಾರ್ಥಿಗಳು, ಯುವಕರ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮಾದಕ ವಸ್ತು ಚಟಕ್ಕೆ ಬಲಿಯಾಗಿ ಚಿಕಿತ್ಸೆ ಪಡೆದು ದುಶ್ಚಟದಿಂದ ಮುಕ್ತಿಹೊಂದುವ ಪ್ರಯತ್ನದಲ್ಲಿರುವವರಿಗೆ ಸಮಾಜ ಮತ್ತು ಕುಟುಂಬದ ಸದಸ್ಯರು ಸಹಕಾರ ನೀಡಬೇಕು. ಅವರು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ನೆರವಾಗಬೇಕೆಂದು ಸಲಹೆ ನೀಡಿದರು.

ನಿವೃತ್ತ ಪೊಲೀಸ್ ಮಾಹಾನಿರ್ದೇಶಕ ಅಜಯ್‍ಕುಮಾರ್‍ಸಿಂಗ್ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಪೊಲೀಸರು ತಮ್ಮ ತನಿಖೆಯ ವಿಧಾನವನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಮೊದಲಿನಂತೆ ಹೊಡೆದು, ಬಡಿದು ತನಿಖೆ ಮಾಡುವ ವಿಧಾನ ಒಳ್ಳೆಯದಲ್ಲ. ಮನೋವಿಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಅವಕಾಶವಿದೆ. ಅದೇ ರೀತಿ ಮಾಹಿತಿ ತಂತ್ರಜ್ಞಾನ ವಿಧಾನವನ್ನು ಆಧುನಿಕತೆಗೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪೊಲೀಸರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಕಾನೂನು ಜಾರಿ ಮತ್ತು ಸಾಮಥ್ರ್ಯ ವೃದ್ಧಿ ಅತ್ಯಂತ ಪ್ರಮುಖವಾಗಿದೆ. ಈ ವಿಷಯದಲ್ಲಿ ಇಲಾಖೆ ಎಷ್ಟೇ ಸಹಕಾರ ನೀಡಿದರೂ ಪೊಲೀಸರು ಮತ್ತು ಸಿಬ್ಬಂದಿಗಳು ವೈಯಕ್ತಿಕವಾದ ಆಸಕ್ತಿ ಹೊಂದಿರಬೇಕು. ಇಲ್ಲದೆ ಹೋದರೆ ಯಾವುದೇ ಕಾರ್ಯಾಗಾರವೂ ಅವರಿಗೆ ಸಹಾಯವಾಗುವುದಿಲ್ಲ.

ತನಿಖಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ವೈಯಕ್ತಿಕ ಆಸಕ್ತಿ ಇದ್ದರೆ ಇರುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಗೆ ಹೆÉಚ್ಚಿನ ತರಬೇತಿ ನೀಡುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು. ವಿಚಾರಸಂಕಿರಣದಲ್ಲಿ ಮಾದಕ ಚಟದಿಂದ ಆಗುವ ಅನಾಹುತಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಮಾದಕ ವಸ್ತುಗಳ ತನಿಖೆಯ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು.  ಹಿರಿಯ ಅಧಿಕಾರಿಗಳಾದ ಎಂ.ಎ.ಸಲೀಂ, ಎ.ಎಸ್.ಎನ್.ಮೂರ್ತಿ, ಅಶ್ವಿನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin