ಶಾಲಾ ಪಠ್ಯಗಳಲ್ಲಿ ಕೆಂಪೇಗೌಡರ ಚರಿತ್ರೆ ಅಳವಡಿಸಬೇಕು : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

Kempegowda--01

ಬೆಂಗಳೂರು, ಜೂ.27- ಶಾಲಾ ಪಠ್ಯಗಳಲ್ಲಿ ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳನ್ನು ಅಳವಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಅರಮನೆ ಮೈದಾನದಲ್ಲಿಂದು ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.  ಕೆಂಪೇಗೌಡರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ. ಸರ್ವಜನಾಂಗದ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ. ಇಂತಹ ಮಹಾನ್ ನಾಯಕನ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ. ನಾಡಪ್ರಭುವಿನ ಆದರ್ಶ, ಅವರ ಆಡಳಿತ ವೈಖರಿ ಮುಂದಿನ ಪೀಳಿಗೆಗೂ ತಲುಪಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರು ನಿರ್ಮಿಸಿ ಎಲ್ಲರಿಗೂ ಒಳಿತು ಮಾಡಿರುವ ಕೆಂಪೇಗೌಡರ ಹೆಸರನ್ನು ಬೆಂಗಳೂರು ವಿವಿಗೆ ನಾಮಕರಣ ಮಾಡಬೇಕು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು, ಕೆಂಪೇಗೌಡರ ಹೆಸರಿನಲ್ಲಿ ಶಾಶ್ವತವಾದ ಭವನ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಕ್ಕಲಿಗ ಸಂಘದವರು, ಮುಖಂಡರು ಇಡುತ್ತಲೇ ಬಂದಿದ್ದಾರೆ. ಇವೆಲ್ಲವನ್ನೂ ಈಡೇರಿಸುವ ಕುರಿತು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.  ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಅದನ್ನು ತಪ್ಪಿಸಲು ನಮ್ಮ ಮೆಟ್ರೋ ಸಹಕಾರಿಯಾಗಿದೆ. ಇನ್ನೂ ಹೆಚ್ಚಿನ ದಟ್ಟಣೆ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಬೆಂಗಳೂರಿನ ರಕ್ಷಣೆ, ಕೆಂಪೇಗೌಡರ ವಿಚಾರಧಾರೆಗಳನ್ನು ಅರಿತುಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

Facebook Comments

Sri Raghav

Admin