ಬೆಂಗಳೂರಿನ ಖ್ಯಾತಿಗೆ ಕಾರಣರಾದ ಕೆಂಪೇಗೌಡರ ಕುಟುಂಬಕ್ಕೆ ನಾವು ಗೌರವ ಸಲ್ಲಿಸಬೇಕು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Kempegowda--01

ಬೆಂಗಳೂರು, ಜೂ.26-ದೇಶ-ವಿದೇಶಗಳಲ್ಲೇ ಬೆಂಗಳೂರು ಖ್ಯಾತಿ ಗಳಿಸಿರುವುದಕ್ಕೆ ಕೆಂಪೇಗೌಡರ ಕುಟುಂಬಕ್ಕೆ ನಾವು ಗೌರವ ಸಲ್ಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸಮಾಜದ ಜನರಿಗೆ ರಕ್ಷಣೆ ಹಾಗೂ ಆಶ್ರಯ ನೀಡಬೇಕೆಂಬ ಮೂಲ ಉದ್ದೇಶದಿಂದ 500 ವರ್ಷಗಳ ಹಿಂದೆಯೇ ಅಡಿಗಲ್ಲು ಹಾಕಿದ್ದರು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಅಂದು ಅವರು ಬೆಂಗಳೂರನ್ನು ನಿರ್ಮಿಸಿದಾಗ ನಗರ ಇಷ್ಟೊಂದು ಬೃಹದಾಕಾರವಾಗಿ ಬೆಳೆಯುತ್ತದೆ ಎಂಬ ಕಲ್ಪನೆಯೂ ಇರಲಿಕ್ಕಿಲ್ಲ ಎಂದು ಸ್ಮರಿಸಿದರು.

ಬೆಂಗಳೂರು ನಗರವನ್ನು ಬೆಳೆಸುವುದರಲ್ಲಿ ಕೇವಲ ಕೆಂಪೇಗೌಡರು ಮಾತ್ರವಲ್ಲ, ಗೌಡ ಸಮಾಜದ ಅನೇಕರು ಶ್ರಮಿಸಿದ್ದಾರೆ. ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ. ನಗರವನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ರಾಜ್ಯ ಸರ್ಕಾರದ ಹೊಣೆ ಇದೆ ಎಂದರು. ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬ ಚಿಂತನೆ ಇದೆ. ಇದರಿಂದ ನಾಡಿನ ಯುವಕರು ಅನುಭವಿಸುತ್ತಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು. ನಮ್ಮ ಸರ್ಕಾರ ಯಾವುದೇ ಒಂದು ಭಾಗಕ್ಕೆ ಸೀಮಿತವಲ್ಲ, ಅಖಂಡ ಕರ್ನಾಟಕದ ಅಭಿವೃದ್ಧಿ ಮಾಡುವುದೇ ಸರ್ಕಾರದ ಗುರಿ ಎಂದು ಹೇಳುವ ಮೂಲಕ ಉತ್ತರ ಕರ್ನಾಟಕಕ್ಕೆ ನಷ್ಟ ಆಗಿದೆ ಎಂಬ ಊಹಾಪ್ರೋಹಗಳಿಗೆ ಉತ್ತರಿಸಿದರು.

Facebook Comments

Sri Raghav

Admin