ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಕಾಲ್‍ಸೆಂಟರ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Khadar-Minister

ಬೆಂಗಳೂರು, ಜೂ.27-ವಸತಿ ಯೋಜನೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಇಲಾಖೆಯಲ್ಲಿ ಕಾಲ್‍ಸೆಂಟರ್ ( ಸಹಾಯವಾಣಿ) ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲ್‍ಸೆಂಟರ್ ಆರಂಭಿಸಿದರೆ ದೂರುಗಳನ್ನು ಸ್ವೀಕರಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದರು.

ನಮ್ಮ ಯೋಜನೆಗಳಲ್ಲಿ ಭಾರೀ ಪ್ರಮಾಣದ ಅವ್ಯವಹಾರ ಹಾಗೂ ದೂರುಗಳು ಕೇಳಿ ಬರುತ್ತಲೇ ಇವೆ. ಶಾಶ್ವತವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕು ಸಾಧ್ಯವಾಗದೇ ಇದ್ದರೂ ನನ್ನ ಹಾದಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇ. ಮೊದಲು ಮಧ್ಯವರ್ತಿಗಳ ಹಾವಳಿಯನ್ನು ಕೊನೆಗಾಣಿಸಿದರೆ ಇದು ಸರಿಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಲ್‍ಸೆಂಟರ್ ಆರಂಭಿಸುವುದು ಕೇವಲ ಅಧಿಕಾರಿಗಳು ಹಾಗೂ ಒಂದಿಬ್ಬರ ಮೇಲೆ ಕ್ರಮ ಕೈಗೊಳ್ಳುವುದಕ್ಕಲ್ಲ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿದೆಯೋ ಅಥವಾ ಮಧ್ಯವರ್ತಿಗಳ ಪಾಲಾಗುತ್ತದೆಯೋ ಎಂಬುದನ್ನು ನಮ್ಮದೇ ಆದ ಮಾಹಿತಿಯಿಂದ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಕಾಲ್‍ಸೆಂಟರ್‍ನಲ್ಲಿ ಯಾರೇ ದೂರು ನೀಡಿದರೂ ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪ್ರತಿಯೊಬ್ಬ ಅರ್ಹರಿಗೂ ಶೂರು ಒದಗಿಸಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾವು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದೆವು. ಮುಂದಿನ ಬಜೆಟ್‍ನಲ್ಲಿ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಸಿಗುವ ವಿಶ್ವಾಸವಿದೆ. ಕರ್ನಾಟಕವನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶ ನನ್ನದಾಗಿದೆ ಎಂದು ಖಾದರ್ ಹೇಳಿದರು. ಇಲಾಖೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಇದರಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಹಿಂದೆ ಮನೆ ಕಟ್ಟುವವರು ಜಿಪಿಎಸ್ ಅಳವಡಿಸಿಕೊಳ್ಳಬೇಕೆಂಬ ನಿಯವನ್ನು ಜಾರಿ ಮಾಡಿದ್ದರಿಂದ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಯಿತು. ಮುಂದೆ ಇನ್ನಷ್ಟು ಸುಧಾರಣೆ ತರಲಿದ್ದೇವೆ ಎಂದು ಆಶ್ವಾಸನೆ ಕೊಟ್ಟರು.

ಹಿರಿಯ ಅಧಿಕಾರಿ ಅನ್ಬುಕುಮಾರ್ ಮಾತನಾಡಿ, ಇನ್ನು ಮುಂದೆ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್‍ಗಳನ್ನು ಬ್ಯಾಂಕ್ ಖಾತೆಗೆ ಎರಡು ದಿನಗಳೊಳಗೆ ಜೋಡಣೆ ಮಾಡಬೇಕು. ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗಲಿದೆ ಎಂದು ಹೇಳಿದರು. ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಮಾಡುವುದರಿಂದ ಸರ್ಕಾರದ ಸಹಾಯ ಧನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ನಿಜವಾದ ಫಲಾನುಭವಿಗಳು ಸರ್ಕಾರದ ಯೋಜನೆಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.  ಇಲಾಖೆಯಲ್ಲಿ ದೂರುಗಳನ್ನು ಸ್ವೀಕರಿಸಲು ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲೇ ಯಾವುದೇ ರೀತಿಯ ಕಾನೂನು ಬಾಹೀರ ಚಟುವಟಿಕೆಗಳು ಕಂಡು ಬಂದರೆ ಸಾರ್ವಜನಿಕರು ಮುಕ್ತವಾಗಿ ದೂರು ನೀಡಬಹುದು. ಇದನ್ನು ಆಧರಿಸಿ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin