ಲೋಕಸಭಾ ಚುನಾವಣೆ ಬಗ್ಗೆ ಕೈಸಚಿವರ ಚರ್ಚೆ, ಸಿದ್ದು ನಮ್ಮ ನಾಯಕರು: ಪರಂ

ಈ ಸುದ್ದಿಯನ್ನು ಶೇರ್ ಮಾಡಿ

congress

ಬೆಂಗಳೂರು, ಜೂ.28- ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ತಯಾರಿ ಹಾಗೂ ರಣನೀತಿ ರೂಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷದ ಸಚಿವರುಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿ ಚರ್ಚಿಸಲಾಯಿತು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಸಭೆ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿ ಸಜ್ಜಾಗಬೇಕು  ಎಂಬುದರ ಬಗ್ಗೆ ಎಐಸಿಸಿ ನೀಡಿದ ಸೂಚನೆ ಹಾಗೂ ಸಚಿವರ ಜವಾಬ್ದಾರಿಗಳನ್ನು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

congress-1

ನಾವು ಮೈತ್ರಿ ಸರ್ಕಾರದಲ್ಲಿದ್ದೇವೆ. ನಮ್ಮ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಸಚಿವರುಗಳಿಗೆ ನಿರ್ದೇಶನ ನೀಡಲಾಗಿದೆ. ಕೆಲವು ಸಣ್ಣಪುಟ್ಟ ಗೊಂದಲಗಳ ಬಗ್ಗೆ ಸಚಿವರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಹೇಳಿದ್ದೇನೆ ಎಂದರು. ಜಿಲ್ಲಾ ಸಚಿವರುಗಳ ಶೀಘ್ರ ನೇಮಕ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಸಚಿವರು ಹೇಳಿದ್ದಾರೆ. ಈ ವಿಚಾರ ಬಿಟ್ಟು ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಚಿವರುಗಳು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗಬೇಕು. ತಮ್ಮ ಕ್ಷೇತ್ರಕ್ಕೆ ಹೋದಾಗ ಪಕ್ಷದ ಶಾಸಕರು, ಅಭ್ಯರ್ಥಿಗಳ ಜತೆ ಮಾತನಾಡಬೇಕು ಎಂದು ಸಚಿವರಿಗೆ ಸೂಚಿಸಲಾಗಿದೆ.  ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈ ಹಂತದಲ್ಲಿ ಚರ್ಚೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಏಳು ಸ್ಥಾನ ಭರ್ತಿಯಾಗಬೇಕಿದೆ. ಅದಕ್ಕೂ ಮುನ್ನ ನಿಗಮ-ಮಂಡಳಿಗಳ ನೇಮಕವಾಗಬೇಕಿದ್ದು, ಮೊದಲು ಸ್ಥಾನ ನೀಡುವ ಬೇಡಿಕೆ ಹಾಗೂ ಸಲಹೆ ಬಂದಿದೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಸಂಪುಟ ವಿಸ್ತರಣೆಗೆ ಕಾಲಮಿತಿ ಇಲ್ಲ. ನಾಳೆಯೂ ಆಗಬಹುದು ಎಂದರು.

ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಸಭೆಯಲ್ಲಿ ಊಹೆಗಳ ಬಗ್ಗೆ ಚರ್ಚೆ ನಡೆಸಿಲ್ಲ. ನಾವು ಸಿದ್ದರಾಮಯ್ಯನವರ ಜತೆ ಈವರೆಗೂ ಚರ್ಚೆ ಮಾಡಿಲ್ಲ ಎಂದರು. ಸರ್ಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಜವಾಬ್ದಾರಿ ಇದ್ದವರು ಮಾತ್ರ ಹೇಳಿಕೆ ಕೊಡಬೇಕು. ಸಿದ್ದರಾಮಯ್ಯನವರು ನಮ್ಮ ನಾಯಕರು. ಸಮನ್ವಯ ಸಮಿತಿ ಅಧ್ಯಕ್ಷ , ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದ್ದೇವೆ. ಅವರ ಹೇಳಿಕೆ ಬಗ್ಗೆ ವಿಶ್ಲೇಷಣೆ ಮಾಡುವುದು ಬೇಡ ಎಂದು ಹೇಳಿದ್ದೇವೆ. ಜುಲೈ 1ರಂದು ಸಮನ್ವಯ ಸಮಿತಿ ಸಭೆ ನಡೆಸುವ ಸಾಧ್ಯತೆ ಇದೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ದಿನಾಂಕ ನಿರ್ಧರಿಸುತ್ತಾರೆ. ಅಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿದ್ದ ದಿನೇಶ್ ಗುಂಡೂರಾವ್ ಅವರು, ಅಸಮಾಧಾನಗೊಂಡಿದ್ದಾರೆ ಹಾಗೂ ವಿದೇಶಕ್ಕೆ ಹೋಗಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ. ಅವರು ಲಡಾಖ್‍ಗೆ ಹೋಗುತ್ತೇನೆ ಎಂದು ಹೇಳಿದ್ದರು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಎರಡೂ ಪಕ್ಷಗಳಲ್ಲಿ ಯಾವುದೇ ಗೊಂದಲಗಳಿದ್ದರೂ ಬದಿಗಿಟ್ಟು ಸರ್ಕಾರ ನಡೆಸುವುದೇ ನಮ್ಮ ಗುರಿ. ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯವರಿಗೆ ತಿಳಿಯಪಡಿಸುವೆ. ಸಮ್ಮಿಶ್ರ ಸರ್ಕಾರದ ಬಾಂಧವ್ಯ ಗಟ್ಟಿಯಾಗಿದೆ. ಇಂದಿನ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ, ಯಾವುದೇ ಹೇಳಿಕೆ ಬಗ್ಗೆ ಚರ್ಚೆ ನಡೆದಿಲ್ಲ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಸಿದ್ದರಾಮಯ್ಯನವರ ಹೇಳಿಕೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ. ಹೈಕಮಾಂಡ್ ಗಮನಕ್ಕೆ ತರುವ ಅಗತ್ಯವೂ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin