ಸಂಪಾದಕ ಬುಖಾರಿ ಹಂತಕ ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದ..!

ಈ ಸುದ್ದಿಯನ್ನು ಶೇರ್ ಮಾಡಿ

rising-kashmir

ನವದೆಹಲಿ,ಜೂ.28- ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಸುಜತ್ ಬುಖಾರಿ ಅವರನ್ನು ಹತ್ಯೆಗೈದ ಶಂಕಿತ ಲಷ್ಕರ್ ಉಗ್ರ ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದನೆಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಪ್ರಸ್ತುತ ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿರುವ ಸಜ್ಜದ್ ಗುಲ್ ಮೂಲತಃ ಕಾಶ್ಮೀರ ನಿವಾಸಿಯಾಗಿದ್ದ. ಈತ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎಂಬಿಎ ವ್ಯಾಸಂಗ ಮಾಡಿ ಇಲ್ಲಿಯೇ ನಾಲ್ಕು ವರ್ಷ ತಂಗಿದ್ದ ಎಂದು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ಖಚಿತಪಡಿಸಿವೆ.

ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬ ಉಗ್ರಗಾಮಿ ಸಂಘಟನೆ ಬಗ್ಗೆ ವ್ಯಾಸಂಗ ಮಾಡುತ್ತಿರುವಾಗಲೇ ಅತೀವ ಒಲವು ಹೊಂದಿದ್ದ ಈತ ರೈಸಿಂಗ್ ಕಾಶ್ಮೀರ್ ಪತ್ರಿಕೆ ಸಂಪಾದಕ ಸುಜತ್ ಬುಖಾರಿ ಹತ್ಯೆಯ ಪ್ರಮುಖ ರೂವಾರಿ ಎಂದು ಪೊಲೀಸರು ಶಂಕಿಸಿದ್ದಾರೆ.2008ರ ಮುಂಬೈ ಮೇಲಿನ ದಾಳಿಯ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಉಗ್ರಗಾಮಿ ಸಂಘಟನೆಯ ಹಿಟ್ ಲಿಸ್ಟ್‍ನಲ್ಲಿರುವ ಲಷ್ಕರ್-ಇ-ತೋಯ್ಬ ಸಂಘಟನೆಯ ಹಫೀಜ್ ಸಯ್ಯದ್ ಈತನಿಗೆ ಗಾಡ್‍ಫಾದರ್ .
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಓದುತ್ತಿದ್ದಾಗಲೇ ಧರ್ಮದ ಬಗ್ಗೆ ಒಲವು ಹೊಂದಿದ್ದ ಸಜ್ಜದ್ ಗುಲ್, ದೇಶದ ನಾನಾ ಕಡೆ ಸಂಭವಿಸಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲೂ ಭಾಗಿಯಾಗಿರುವ ಶಂಕೆಯಿದೆ ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.

ಕಾಶ್ಮೀರದಲ್ಲಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಗುಲ್ ಕಳೆದ ಐದು ವರ್ಷಗಳಿಂದ ಕಣ್ಮರೆಯಾಗಿದ್ದಾನೆ. ಭಾರತದಲ್ಲಿದ್ದರೆ ತನಗೆ ಉಳಿಗಾಲವಿಲ್ಲ ಎಂಬುದನ್ನು ಅರಿತ ಈತ ಸದ್ಯಕ್ಕೆ ರಾವಲ್‍ಪಿಂಡಿಯಲ್ಲಿ ವಾಸವಾಗಿದ್ದಾನೆ. ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕವೇ ಬಗೆಹರಿಯಬೇಕೆಂದು ಬುಖಾರಿ ಬಯಸಿದ್ದರು. ಇದಕ್ಕಾಗಿ ಭಾರತ ಮತ್ತು ಪಾಕಿಸ್ತಾನ ತಮ್ಮ ವೈಮನಸ್ಸು ಮರೆತು ಶಾಂತಿ ನೆಲಸಲು ಕೈಜೋಡಿಸಬೇಕೆಂಬುದು ಅವರ ಆಶಯವಾಗಿತ್ತು. ಲಷ್ಕರ್-ಇ-ತೋಯ್ಬದಿಂದ ಸುಫಾರಿ ಪಡೆದಿದ್ದ ಕೆಲ ಉಗ್ರರು ಬುಖಾರಿಯನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗ ಭಾರತದ ತನಿಖಾ ಸಂಸ್ಥೆ ಸಜ್ಜದ್ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

Facebook Comments

Sri Raghav

Admin