ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆಯಲ್ಲಿ ಮಹತ್ವ ವಿಷಯಗಳ ಬಗ್ಗೆ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Meeting

ಬೆಂಗಳೂರು,ಜೂ.29- ಅಧಿವೇಶನದಲ್ಲಿ ಕೈಗೊಳ್ಳ ಬೇಕಾದ ಕಾರ್ಯತಂತ್ರಗಳು, ವಿಧಾನಪರಿಷತ್‍ನ ಪ್ರತಿ ಪಕ್ಷದ ನಾಯಕ ಸ್ಥಾನಕ್ಕೆ ಆಯ್ಕೆ ಹಾಗೂ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸೇರಿದಂತೆ ಕೆಲವು ಮಹತ್ವ ವಿಷಯಗಳ ಬಗ್ಗೆ ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚಿಸಲಾಯಿತು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೋರ್‍ಕಮಿಟಿ ಸದಸ್ಯರಾದ ಅನಂತಕುಮಾರ್, ನಳಿನ್‍ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ ಮತ್ತಿತರರು ಆಗಮಿಸಿದ್ದರು. ಆದರೆ ಕೆ.ಎಸ್.ಈಶ್ವರಪ್ಪ ಮತ್ತು ಡಿ.ವಿ.ಸದಾನಂದಗೌಡ ಗೈರು ಹಾಜರಾಗಿದ್ದರು.
ಕಾರ್ಯ ಕಾರಣಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಿಢೀರನೆ ನಡೆದ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕೇವಲ ಔಪಚಾರಿಕವಾಗಿ ಮಾತ್ರ ನಡೆಯಿತು ಎಂದು ತಿಳಿದುಬಂದಿದೆ.

ಕೆ.ಎಸ್.ಈಶ್ವರಪ್ಪ ಶಾಸಕರಾಗಿ ಆಯ್ಕೆಯಾಗಿರುವುದರಿಂದ ತೆರವಾಗಿರುವ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು , ಪಕ್ಷ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆಯೂ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾದಿಬೀದಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದರಿಂದ ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಕಟ್ಟಿ ಹಾಕುವ ಬಗ್ಗೆ ಮಾತುಕತೆ ನಡೆದಿದೆ. ಆದರೆ ಇಂದಿನ ಸಭೆಗೆ ಈಶ್ವರಪ್ಪ ಮತ್ತು ಸದಾನಂದಗೌಡ ಗೈರು ಹಾಜರಾಗಿದದ್ದು ಎದ್ದು ಕಾಣುತ್ತಿತ್ತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್, ಜೆಡಿಎಸ್‍ನ ಅಪವಿತ್ರ ಮೈತ್ರಿ, ಅಧಿವೇಶನದಲ್ಲಿ ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಜನರಿಗೆ ತಲುಪಿಸುವುದು, ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಕಾರ್ಯಕರ್ತರನ್ನು ಹುರಿದುಂಬಿಸಲು ಪ್ರವಾಸ ಕೈಗೊಳ್ಳುವುದು ಸೇರಿದಂತೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin