ಬಿಬಿಎಂಪಿ ವಿಭಜನೆಗೆ ಬಿಜೆಪಿ ವಿರೋಧ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-Meeting

ಬೆಂಗಳೂರು, ಜೂ.29- ಬಿಬಿಎಂಪಿ ವಿಭಜನೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಂದು ನಡೆದ ಪಾಲಿಕೆ ಮಾಸಿಕ ಸಭೆಗೆ ಭಾರತೀಯ ಜನತಾ ಪಕ್ಷದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಆಗಮಿಸುವ ಮೂಲಕ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಕೌನ್ಸಿಲ್ ಸಭೆ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಪಾಲಿಕೆಗೆ ಆಗಮಿಸಿದ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸ್ವಾಗತ ಕೋರಲಾಯಿತು. ನಂತರ ಪ್ರಾರಂಭವಾದ ಸಭೆಯಲ್ಲಿ ಬಿಬಿಎಂಪಿ ವಿಭಜನೆ ಸಂಬಂಧ ವಿಷಯ ಪ್ರಸ್ತಾಪವಾಯಿತು.

ಮೇಯರ್ ಸಂಪತ್‍ರಾಜ್ ಮಾತನಾಡಿ, ಪಾಲಿಕೆ ವಿಭಜನೆ ಸಂಬಂಧ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು. ಈಗ ಬೆಂಗಳೂರು ವಿಶಾಲವಾಗಿ ಬೆಳೆಯುತ್ತಲೇ ಇದೆ. ಹಾಗಾಗಿ ಬಿಬಿಎಂಪಿ ವಿಭಜನೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು.ಮೇಯರ್ ಆಯ್ಕೆಯನ್ನು ಜನರೇ ಮಾಡಿದರೆ ಉತ್ತಮವಾಗಿರುತ್ತದೆ. ಪಾಲಿಕೆ ವಿಭಜನೆ ಮಾಡುವುದರಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನೂ ಹೆಚ್ಚು ಒತ್ತು ನೀಡಲು ಹಾಗೂ ನಾಗರಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಒಂದು ವೇಳೆ ಈಗಲೇ ಬಿಬಿಎಂಪಿ ವಿಭಜನೆಯಾದರೆ ಈಗಿನ ಪಾಲಿಕೆ ಆಡಳಿತಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಮುಂಬರುವ ಆಡಳಿತಾವಧಿಗೆ ಇದು ಅನ್ವಯವಾಗಲಿದೆ ಎಂದು ಸಂಪತ್‍ರಾಜ್ ಹೇಳಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಿಬಿಎಂಪಿ ವಿಭಜನೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.

ಬಿಜೆಪಿಯವರಿಗೆ ಬೆಂಗಳೂರಿನ ಅಭಿವೃದ್ಧಿ ಬೇಕಿಲ್ಲ. ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಮೂದಲಿಸಿದರು. ಬಿಬಿಎಂಪಿ ವಿಭಜನೆ ಬಗ್ಗೆ ಚರ್ಚೆ ಮಾಡೋಣವೆಂದರೂ ಕೇಳದೆ ವಾದ-ವಿವಾದ ಮುಂದುವರೆದಿತ್ತು. ಕಾಂಗ್ರೆಸ್‍ನ ಗುಣಶೇಖರ್ ಮಾತನಾಡಿ, ನಾವು ಕತ್ತಲೆ ಕೋಣೆಯಲ್ಲಿದ್ದೇವೆ. ನಮಗೆ ಮಾಹಿತಿ ಬೇಕು. ಯಾರೂ ಬೆಂಗಳೂರನ್ನು ಒಡೆಯಲು ಹೋಗುತ್ತಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಲು ಮುಂದಡಿ ಇಡಲಾಗಿದೆ. ವರದಿ ಸಂಪೂರ್ಣವಾಗಿ ಕೌನ್ಸಿಲ್‍ನಲ್ಲಿ ಮಂಡನೆಯಾಗಬೇಕು. ಇಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ನಂತರ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಬಿಬಿಎಂಪಿ ವಿಭಜನೆ ಸರಿಯಲ್ಲ. ಶಾಂತಕುಮಾರಿ ಅವರು ಮೇಯರ್ ಆಗಿದ್ದಾಗ ಈ ವಿಷಯ ಪ್ರಸ್ತಾಪ ಆಗಿತ್ತು. ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ಎಂದು ಹೇಳಲಾಗಿತ್ತು ಎಂದರು. ಐದು ವರ್ಷ ಮೇಯರ್ ಅಧಿಕಾರ ಇರುವುದಾದರೆ ಸ್ವಾಗತಾರ್ಹ. ಆದರೆ ಪಾಲಿಕೆಯನ್ನು ಐದು ಭಾಗವಾಗಿ ವಿಭಜನೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಹೇಗೋ, ಅದೇ ರೀತಿ ಬೆಂಗಳೂರಿಗೆ ಒಬ್ಬರೇ ಮೇಯರ್ ಇರಬೇಕು ಎಂದರು.

ಬಿಬಿಎಂಪಿಯನ್ನು 5 ಪಾಲಿಕೆ ಮಾಡಲು ಹೊರಟರೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು ಬೇಕು ಎನ್ನುತ್ತಾರೆ. ದೆಹಲಿಯಲ್ಲಿ ಮೂರು ಕಾರ್ಪೊರೇಟರ್ ರೇಷನ್ ಮಾಡಲಾಗಿತ್ತು. ಆದರೆ ಅದು ವಿಫಲವಾಗಿದೆ. ಮುಂಬೈನಲ್ಲೂ ಎರಡು ಭಾಗವಾಗಿ ವಿಭಜನೆ ಮಾಡಲಾಗಿತ್ತು. ಅಲ್ಲೂ ವಿಫಲವಾಗಿದೆ. ಬೆಂಗಳೂರಿನಲ್ಲೂ ಇದೇ ಕಥೆಯಾಗಲಿದೆ ಎಂದು ಹೇಳಿದರು. ಚುನಾವಣೆಯಲ್ಲಿ ನಾವು ಹೊಡೆದಾಡೋಣ. ಆದರೆ ನಾವು ಮಾಡೋ ತಪ್ಪು ಮುಂದೆ ಅನಾಹುತಕ್ಕೆ ಕಾರಣವಾಗಬಾರದು ಎಂದು ಆಡಳಿತ ಪಕ್ಷದ ನಾಯಕ ಶಿವರಾಜ್ ಹೇಳಿದಾಗ, ಪಾಲಿಕೆ ವಿಭಜನೆ ಮಾಡಿದರೆ ಶಿವರಾಜಪ್ಪನಾಣೆ ಉದ್ಧಾರ ಆಗಲ್ಲ ಎಂದು ಪದ್ಮನಾಭರೆಡ್ಡಿ ಕಾಲೆಳೆದರು.

ಅದಕ್ಕೆ ಕಾಂಗ್ರೆಸ್ಸಿಗರು, ಆಡಳಿತ ಪಕ್ಷದ ನಾಯಕ ಶಿವರಾಜ್ ಎಂದು ಕರೆಯಬೇಕು ಎಂದು ಕೂಗಿದರು.  ಈ ವೇಳೆ ನೇತ್ರ ನಾರಾಯಣ್ ಮಾತನಾಡಿ, ಬಿಬಿಎಂಪಿ ವಿಭಜನೆ ಸಂಬಂಧ ಸಮಿತಿಯವರು ನಮ್ಮಗಳ ಅಭಿಪ್ರಾಯ ಪಡೆಯಬೇಕಿತ್ತು. ಆದರೆ ನಮಗೆ ಸಿಕ್ಕಿರುವುದು ಮಾಧ್ಯಮಗಳಲ್ಲಿ ಬಂದಿರುವಷ್ಟೇ ಮಾಹಿತಿ. ಆ ವರದಿ ಬಗ್ಗೆ ವಿಶೇಷ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು.

Facebook Comments

Sri Raghav

Admin