300 ಕೋಟಿ ರೂ. ವೆಚ್ಚ ರಾಜ್ಯದ 30 ಪ್ರವಾಸಿ ತಾಣಗಳ ಅಭಿವೃದ್ಧಿ

ಈ ಸುದ್ದಿಯನ್ನು ಶೇರ್ ಮಾಡಿ

Sa-Ra-Mahesh--01

ಮೈಸೂರು, ಜೂ.29-ರಾಜ್ಯದ 30 ಪ್ರವಾಸಿ ತಾಣಗಳನ್ನು 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಹಮ್ಮಿಕೊಂಡಿದ್ದ ಮಾಧ್ಯಮ ಸಮವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು, ಬಾದಾಮಿ, ಶ್ರವಣಬೆಳಗೊಳಗಳಿಗೆ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮೈಸೂರಿನ ವಸ್ತು ಪ್ರದರ್ಶನವನ್ನು ಅಭಿವೃದ್ಧಿಪಡಿಸಿ ವರ್ಷಪೂರ್ತಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗುವುದು. ಅದೇ ರೀತಿ ಕುಕ್ಕರಹಳ್ಳಿ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಾಲ್ಕು ಸಾವಿರಕ್ಕೆ ಮೈಸೂರು ಸಿಲ್ಕ್ ಸೀರೆ:

ಮೈಸೂರು ಸಿಲ್ಕ್ ಸೀರೆ ಮಹಿಳೆಯರಿಗೆಲ್ಲ ಅಚ್ಚುಮೆಚ್ಚು. ನಮ್ಮಲ್ಲಿ 10 ಸಾವಿರ ರೂ.ನಿಂದ 3 ಲಕ್ಷ ರೂ.ವರೆಗೂ ಅತ್ಯುತ್ತಮ ಗುಣಮಟ್ಟದ ಮೈಸೂರು ಸಿಲ್ಕ್ ಸೀರೆಗಳು ಲಭ್ಯವಿವೆ. ಆದರೆ, ಬಡವರು ಖರೀದಿಸುವುದು ಕಷ್ಟ. ಹಾಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ನಾಲ್ಕು ಸಾವಿರ ರೂ. ಬೆಲೆಗೆ ಮೈಸೂರು ಸಿಲ್ಕ್ ಸೀರೆಯನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರೇಷ್ಮೆ ಬೆಳೆಗಾರರಿಗೆ ಅನುಕೂಲ:
ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಲವು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೈಸೂರು ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ಇಲ್ಲೂ ಕೂಡ ರೇಷ್ಮೆ ಮಾರುಕಟ್ಟೆ ಪ್ರಾರಂಭಿಸಲಾಗುವುದು. ರಾಮನಗರ, ಚನ್ನಪಟ್ಟಣದಲ್ಲಿ ಈಗಾಗಲೇ ರೇಷ್ಮೆ ಮಾರುಕಟ್ಟೆಗಳಿವೆ. ಮೈಸೂರು ಭಾಗದವರು ಈತನಕ ಈ ಜಿಲ್ಲೆಗೇ ಹೋಗುತ್ತಿದ್ದಾರೆ. ಇನ್ನು ಮುಂದೆ ಇಲ್ಲೇ ಅನುಕೂಲವಾಗಲಿದೆ ಎಂದರು. ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‍ಬಾಬು ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin