37 ಸ್ಥಾನದವರ ಬಜೆಟ್‍ಗೆ ಪಾವಿತ್ರ್ಯತೆ ಎಲ್ಲಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BJP
ಬೆಂಗಳೂರು, ಜೂ.29- ಕೇವಲ 37 ಮಂದಿ ಶಾಸಕರನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲು ಮುಂದಾಗಿರುವ ಬಜೆಟ್‍ಗೆ ಯಾವುದೇ ಪಾವಿತ್ರವಿಲ್ಲ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.  ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೂರನೇ ಸ್ಥಾನ ಪಡೆದ ಪಕ್ಷ ಇಂದು ಬಜೆಟ್ ಮಂಡಿಸಲು ಮುಂದಾಗಿರುವುದು ದುರ್ದೈವವೇ ಸರಿ. ಸಮನ್ವಯ ಸಮಿತಿಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ಇದಕ್ಕೆ ಪಾವಿತ್ರತೆ ಇರುತ್ತದೆಯೇ ಎಂದು ಪ್ರಶ್ನಿಸಿದರು.

ಬಜೆಟ್ ಮಂಡನೆ ಮಾಡುವುದೇ ಬೇಡ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಪೂರಕ ಬಜೆಟ್ ಮಂಡಿಸಿ ಸಾಧ್ಯವಾದರೆ, ಹೊಸದಾಗಿ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡುವಂತೆ ಕಾಂಗ್ರೆಸ್ ನಾಯಕರು ಹೇಳುತ್ತಿರುವಾಗ ಕುಮಾರಸ್ವಾಮಿ ಬಜೆಟ್‍ಗೆ ಯಾವ ಮಾನ್ಯತೆ ಇರುತ್ತದೆ ಎಂದರು. ಈಗಾಗಲೇ ಎರಡು ಪಕ್ಷಗಳ ನಾಯಕರು ತಮ್ಮ ತಮ್ಮಲ್ಲೇ ಹಾದಿರಂಪ -ಬೀದಿರಂಪ ಮಾಡುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಕೈ ಹಾಕಬಾರದು. ಸರ್ಕಾರ ತನ್ನಿಂದ ತಾನೇ ಬಿದ್ದು ಹೋಗುವವರೆಗೂ ಕಾಯೋಣ ಎಂದರು.

ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಮಾಧ್ಯಮಗಳಲ್ಲಿ ಚರ್ಚೆ ಮಾಡುವಾಗಲೂ ಎಚ್ಚರದಿಂದ ಇರಬೇಕು. ಪಕ್ಷಕ್ಕೆ ಮುಜುಗರ ತರುವಂತಹ ಯಾರೊಬ್ಬರನ್ನೂ ಸಹಿಸುವುದಿಲ್ಲ ಎಂದು ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ 38 ಸ್ಥಾನ ಪಡೆದಿರುವ ಜೆಡಿಎಸ್ ಅವಕಾಶದ ಲಾಭ ಪಡೆದು ಅಧಿಕಾರ ಹಿಡಿದಿದೆ. ಇದಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿರುವುದು ದುರಂತವೇ ಸರಿ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ. ನಾವು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸದೆ ಜನಾದೇಶ ಬರುವವರೆಗೂ ತಾಳ್ಮೆಯಿಂದಿರೋಣ ಎಂದರು.

ಗುತ್ತಿಗೆದಾರರ ಆರೋಪ:
ಹಿಂದಿನ ನೀರಾವರಿ ಯೋಜನೆಗಳಿಗೆ ನೀಡಲಾಗುತ್ತಿದ್ದ ಕಮಿಷನ್ ಹಣವನ್ನು ನೀಡುವವರೆಗೂ ಯಾವುದೇ ನೀರಾವರಿ ಯೋಜನೆಗಳ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಖುದ್ದು ಸಚಿವರೇ ಹೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀವು ಎಷ್ಟು ಕಮಿಷನ್ ಕೊಟ್ಟಿದ್ದೀರೋ ನನಗೆ ಗೊತ್ತಿಲ್ಲ. ಈಗ ನಾನು ಸಚಿವನಾಗಿದ್ದೇನೆ. ನೀರಾವರಿ ಯೋಜನೆಯ ಬಿಲ್‍ಗಳು ಪಾವತಿಯಾಗಬೇಕಾದರೆ ಕಮಿಷನ್ ಕೊಡುವಂತೆ ಸಚಿವರು ಗುತ್ತಿಗೆದಾರರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರನ್ನು ದೂರಿದರು.

ವಿಧವಾ ವೇತನ, ಭಾಗ್ಯಲಕ್ಷ್ಮಿ, ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸರ್ಕಾರ ಕಳೆದ ಆರು ತಿಂಗಳಿನಿಂದ ಹಣವನ್ನೇ ನೀಡುತ್ತಿಲ್ಲ. ಸುಮಾರು 10ಸಾವಿರ ಕೋಟಿ ಬಾಕಿ ಇದೆ ಎಂದು ಹೇಳಿದರು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವವರೆಗೂ ನಾವು ಹೋರಾಟ ಮಾಡೋಣ. ಅಧಿಕಾರ ಹಿಡಿಯುವುದು ನಮ್ಮ ಗುರಿಯಾಗಬಾರದು. ಕಾರ್ಯಕರ್ತರು ಇದಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ರಾಜ್ಯದ ಜನತೆ ನಮಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರೂ ಪೂರ್ಣ ಬಹುಮತ ನೀಡಲಿಲ್ಲ. ಯಾವ ಕಾರಣಕ್ಕಾಗಿ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಸುಮಾರು 15 ಕ್ಷೇತ್ರಗಳಲ್ಲಿ ಮೂರುಸಾವಿರ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕಬೇಕಿದೆ ಎಂದರು.

ಸ್ವತಂತ್ರ ಭಾರತ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ಕೇವಲ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ತೀರ್ಪು ನೀಡಿದ್ದು ಇದೇ ಮೊದಲು. ನಮಗೆ ಅವಕಾಶವಿದ್ದಿದ್ದರೆ. ಕಾಂಗ್ರೆಸ್‍ನ ಮತ್ತು ಜೆಡಿಎಸ್ ಅನೇಕ ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ದರಿದ್ದರು. ಇದರಿಂದ ನಾವು ಹತಾಶರಾಗಿಲ್ಲ ಎಂದು ಹೇಳಿದರು.  ರಾಜ್ಯದ ಉಸ್ತುವಾರಿ ಮುರಳೀಧರರಾವ್ ಮಾತನಾಡಿ, ಕರ್ನಾಟಕದ ಜನತೆ ನಮ್ಮ ಪಕ್ಷಕ್ಕೆ ಬಹುಮತ ನೀಡದಿದ್ದರೂ ಜನಾದೇಶ ನಮ್ಮ ಪರವಾಗಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷ ಪೂರೈಸುವುದಿಲ್ಲ. ಮುಂದೆ ನಮಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್‍ಕುಮಾರ್, ರಮೇಶ್‍ಜಿಗಜಿಣಗಿ, ಮುಖಂಡರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಗೋವಿಂದ ಕಾರಜೊಳ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಬಿ.ಎಲ್.ಸಂತೋಷ್, ಶ್ರೀರಾಮುಲು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಡಿ.ವಿ.ಸದಾನಂದಗೌಡ ಹಾಗೂ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದರು.

Facebook Comments

Sri Raghav

Admin