ಕೆಂಪೇಗೌಡರ ಕನಸಿನ ಬೆಂಗಳೂರನ್ನು ಒಡೆಯಬೇಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Bangalore-Basavaraj--01

ಬೆಂಗಳೂರು, ಜೂ.30- ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು ಎಂದು ಪದ್ಮನಾಭನಗರ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ವಿಭಜನೆ ಮಾಡಲು ಮುಂದಾದಾಗ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಬೆಂಗಳೂರನ್ನು ಒಡೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು ಎಂದು ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಮುಖ್ಯಮಂತ್ರಿಗಳು ಈ ಕೂಡಲೇ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ಒಡೆಯಲು ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬಿಬಿಎಂಪಿಯನ್ನು ಒಡೆಯಲು ಮುಂದಾಗಿದ್ದು ಹಾಗೂ ಲಿಂಗಾಯತ -ವೀರಶೈವ ಜನಾಂಗವನ್ನು ಬೇರ್ಪಡಿಸಲು ಮುಂದಾಗಿದ್ದ ಪರಿಣಾಮವೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 78 ಸ್ಥಾನಗಳನ್ನು ಪಡೆಯುವಂತಾಯಿತು ಎನ್ನುವುದನ್ನು ಕುಮಾರಸ್ವಾಮಿ ಅವರು ಮರೆಯಬಾರದು ಎಂದು ಬಸವರಾಜ್ ಸಲಹೆ ನೀಡಿದರು.  ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎನ್ನುವ ಬಿ.ಎಸ್.ಪಾಟೀಲ್ ಅವರು ತಾವು ಮುಖ್ಯ ಕಾರ್ಯದರ್ಶಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಏಕೆ ಒತ್ತು ನೀಡಲಿಲ್ಲ ಹಾಗೂ ಬಿಬಿಎಂಪಿಯನ್ನು ವಿಭಜಿಸಿಲಿಲ್ಲ ಎಂದು ಅವರು ಪ್ರಶ್ನಿಸಿದರು.

ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ ಅವರು ತಮ್ಮ ಅವಧಿಯಲ್ಲಿ ವಿಭಜನೆ ಬೇಡ. ದಕ್ಷ ಅಧಿಕಾರಿಗಳನ್ನು ನೇಮಿಸಿ ಪಾಲಿಕೆಯನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿಕೆ ನೀಡುತ್ತಿದ್ದವರು ತಜ್ಞರ ಸಮಿತಿ ಸದಸ್ಯರಾಗಿ ನೇಮಕಗೊಂಡ ನಂತರ ಉಲ್ಟಾ ಹೊಡೆಯುತ್ತಿರುವ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.

ನಗರಕ್ಕೆ ಇರುವುದು ನಾಲ್ಕು ಗಡಿಗೋಪುರ. ನೀವು ಪಾಲಿಕೆಯನ್ನು ಐದು ಭಾಗ ಮಾಡಿದರೆ ಐದನೆ ಗಡಿಗೋಪುರ ಎಲ್ಲಿ ಕಟ್ಟುವುದು? ಒಂದು ವೇಳೆ ವಿಭಜನೆ ಮಾಡಲು ಮುಂದಾದರೆ ಅದು ನಾಡಪ್ರಭು ಕೆಂಪೇಗೌಡ ಅವರಿಗೆ ಮಾಡಿದ ಅಪಮಾನವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂತಹ ಕ್ರಮಕ್ಕೆ ಮುಂದಾಗಬಾರದು ಎಂದರು. ಬಿಬಿಎಂಪಿ ವಿಭಜನೆಗೆ ನಾಡಿನ ಚಿಂತಕರು, ಸಾಹಿತಿಗಳು, ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಬೇಕು ಎಂದು ಅವರು ಕರೆ ನೀಡಿದರು.

ವಿಭಜನೆಯ ಬದಲು ಪಾಲಿಕೆಯ 8 ವಲಯಗಳಿಗೆ ದಕ್ಷ ಐಎಎಸ್ ಅಧಿಕಾರಿಗಳನ್ನು ಜಂಟಿ ಆಯುಕ್ತರನ್ನಾಗಿ ನೇಮಿಸಿ ಎಲ್ಲಾ ಕಡತಗಳನ್ನು ಆ ಅಧಿಕಾರಿಗಳೇ ವಿಲೇವಾರಿ ಮಾಡುವಂತೆ ಅಧಿಕಾರ ವಿಕೇಂದ್ರೀಕರಣ ಮಾಡಿದರೆ ನಗರವನ್ನು ಸಾಕಷ್ಟು ಅಭಿವೃದ್ಧಿಪಡಿಸಬಹುದು ಎಂದು ಅವರು ಸಲಹೆ ನೀಡಿದರು.

Facebook Comments

Sri Raghav

Admin