ಪರೀಕ್ಷೆಗೂ ಮುನ್ನ ಇಂಜಿನಿಯರಿಂಗ್ ಪ್ರಶ್ನೆ ಪತ್ರಿಕೆಗಳು ಲೀಕ್, ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Question-Papers
ಪಾಂಡವಪುರ,ಜು.1-ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೂ ಮುನ್ನ ಬಹಿರಂಗಗೊಂಡಿರುವ ಕುರಿತಂತೆ ತನಿಖೆಗೆ ಆದೇಶಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಬಯಲಾಗಿದ್ದು , ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರೊಬ್ಬರಿಗೆ ಬೆಳಗಾವಿ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು ಬೋಡ್)ನಿಂದ ಅಧಿಕೃತ ನೋಟಿಸ್ ಜಾರಿ ಮಾಡಿ ತನಿಖೆಗೆ ಆದೇಶಿಸಿದೆ.

ಕಳೆದ ಜೂ.26ರಂದು ರಾಜ್ಯಾದ್ಯಂತ ಬಿಇ, ಇ ಅಂಡ್ ಸಿ ವಿಭಾಗದ ಪರೀಕ್ಷೆ ನಡೆದಿತ್ತು. ಇದಕ್ಕೂ ಒಂದು ವಾರ ಮುಂದಿತವಾಗಿ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಕೈಗೆ ಪ್ರೊ.ಡಾ.ಆನಂದರಾವ್ ಅವರ ಬರವಣಿಗೆಯ ಪ್ರಶ್ನೆ ಪತ್ರಿಕೆ ದೊರೆತಿತ್ತು. ಪ್ರಾಧ್ಯಾಪಕರ ಈ ಕೈ ಬರವಣಿಗೆ ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷೆ ದಿನ ನೀಡಿದ ಪ್ರಶ್ನೆ ಪತ್ರಿಕೆ ಒಂದೇ ಆಗಿದ್ದು , ಗೌಪ್ಯವಾಗಿ ಇರಬೇಕಾದ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿತ್ತು.ಈ ಆರೋಪದ ಮೇರೆಗೆ ಬಿಜಿಎಸ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರ ತನಿಖೆಗೆ ಆದೇಶಿಸಿ ನೋಟಿಸ್ ಜಾರಿಗೊಳಿಸಲಾಗಿದೆ.

ವಿಟಿಯು ಬೋರ್ಡ್‍ನಿಂದ ಬಿಇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಪರಿಣಿತ ಪ್ರಾಧ್ಯಾಪಕರನ್ನು ಕರೆಸಿಕೊಳ್ಳಲಾಗಿತ್ತು. ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಾನಾ ಪ್ರಾಧ್ಯಾಪಕರಿಂದ ಪ್ರಶ್ನೆಪತ್ರಿಕೆ ಸಿದ್ದಪಡಿಸಿ ನಂತರ ಅದನ್ನು ಗೌಪ್ಯವಾಗಿಟ್ಟು ಅದರಲ್ಲಿ ಒಂದು ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಯ ದಿನದಂದು ಅರ್ಧಗಂಟೆ ಮೊದಲು ಆನ್‍ಲೈನ್ ಮುಖಾಂತರ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಿಗೆ ರವಾನಿಸುವುದು ನಿಯಮ.

ಅಲ್ಲದೆ ಗೌಪ್ಯವಾಗಿ ಸಿದ್ದಪಡಿಸಲಾಗಿರುವ ಪ್ರಶ್ನೆ ಪತ್ರಿಕೆಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ಕಟ್ಟುನಿಟ್ಟಿನ ಕಾನೂನು ಇದೆ. ಹೀಗಿದ್ದರೂ ನಿಯಮ ಮೀರಿ ಪ್ರಾಧ್ಯಾಪಕರೊಬ್ಬರು ಪ್ರಶ್ನೆ ಪತ್ರಿಕೆಯನ್ನು ಕೈ ಬರಹದಲ್ಲಿ ನೀಡಿರುವುದರಿಂದ ಪತ್ರಿಕೆ ಬಹಿರಂಗಗೊಂಡಿದ್ದು , ಬಿಜಿಎಸ್ ಕಾಲೇಜು ಹೊರತುಪಡಿಸಿ ರಾಜ್ಯದ ಇತರೆ ಯಾವುದೇ ಕಾಲೇಜುಗಳಲ್ಲಿಯೂ ಪತ್ರಿಕೆ ಬಯಲಾಗಿರಲಿಲ್ಲ. ಪ್ರಶ್ನೆಪತ್ರಿಕೆ ಬಹಿರಂಗೊಂಡ ಹಿನ್ನೆಲೆಯಲ್ಲಿ ಈ ಎರಡು ವಿಭಾಗಗಳ ಮರು ಪರೀಕ್ಷೆಯನ್ನು ಜು.9ರಂದು ನಡೆಸಲಾಗುತ್ತಿದ್ದು, ಪ್ರಕರಣದ ಬಗ್ಗೆ ಉನ್ನತ ಶಿಕ್ಷಣ ಜಿ.ಟಿ.ದೇವೇಗೌಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Facebook Comments

Sri Raghav

Admin