ಕುಕ್ಕರ್ ವಿಷಲ್ ನುಂಗಿದ್ದ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Coocker

ಮದ್ದೂರು, ಜು.1- ಪೋಷಕರು ಒಂದು ಕ್ಷಣ ಮೈ ಮರೆತರೆ ಏನಾಗುತ್ತದೆ ಎಂಬುದಕ್ಕೆ ಮದ್ದೂರಿನಲ್ಲಿ ರಾತ್ರಿ ನಡೆದ ಹೃದಯ ವಿದ್ರಾವಕ ಘಟನೆಯೇ ಸಾಕ್ಷಿ. ಒಂದು ವರ್ಷದ ಮಗು ಕುಕ್ಕರ್ ವಿಷಲ್ ನುಂಗಿ ಮೃತಪಟ್ಟಿರುವುದು ಕುಟುಂಬ ವಲಯದಲ್ಲಿ ಸ್ಮಶಾನ ಮೌನ ಆವರಿಸಿದೆ. ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಮರಿಲಿಂಗೇಗೌಡ ಹಾಗೂ ರೂಪಾ ದಂಪತಿ ಪುತ್ರ ಭುವನ್‍ಗೌಡ ಮೃತಪಟ್ಟ ಮಗು. ಮರಿಲಿಂಗೇಗೌಡ ಹಾಗೂ ರೂಪಾ ದಕ್ಷಿಣಕನ್ನಡ ಜಿಲ್ಲೆ ಕುಂದಾಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮರಿಲಿಂಗೇಗೌಡ ಸರ್ವೇಯರ್ ಕೆಲಸ ಮಾಡುತ್ತಿದ್ದರೆ, ರೂಪಾ ಕಂದಾಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ಮಗುವನ್ನು ಮರಿಲಿಂಗೇಗೌಡ ಅವರ ತಾಯಿ ಪುಟ್ಟಲಿಂಗಮ್ಮ ನೋಡಿಕೊಳ್ಳುತ್ತಿದ್ದರು. ರಾತ್ರಿ ಮಗುವಿಗೆ ಊಟ ಮಾಡಿಸಲೆಂದೇ ಪುಟ್ಟಲಿಂಗಮ್ಮ ಅಡುಗೆ ಮನೆಗೆ ಹೋಗಿ ಕುಕ್ಕರ್‍ನಿಂದ ಅನ್ನ ಹಾಕಿಕೊಂಡಿದ್ದಾರೆ.

ಇತ್ತ ಮಗು ಕುಕ್ಕರ್ ವಿಷಲ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದೆ. ಇದು ಪುಟ್ಟಲಿಂಗಮ್ಮ ಅವರ ಗಮನಕ್ಕೆ ಬಂದಿಲ್ಲ. ಅಡುಗೆ ಮನೆಯಿಂದ ಅನ್ನ ಹಾಕಿಕೊಂಡು ಹೊರಗೆ ಬಂದಾಗ ಮಗು ಒದ್ದಾಡುತ್ತಿರುವುದನ್ನು ಗಮನಿಸಿ ತಕ್ಷಣ ನೆರೆಹೊರೆಯವರ ಸಹಾಯ ಪಡೆದು ನೋಡಿದಾಗ ಗಂಟಲಲ್ಲಿ ಕುಕ್ಕರ್ ವಿಷಲ್ ಸಿಕ್ಕಿಕೊಂಡಿರುವುದು ಕಂಡುಬಂದಿದೆ.

ತಕ್ಷಣ ಮಗುವನ್ನು ಮದ್ದೂರು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರ ಸಲಹೆ ಮೇರೆಗೆ ಮಂಡ್ಯ ಜಿಲ್ಲಾಸ್ಪತ್ರೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ತೊದಲು ಮಾತನಾಡುತ್ತ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಈ ಮಗುವಿನ ಸಾವಿನಿಂದ ಕುಟುಂಬದಲ್ಲಿ ಮೌನ ಆವರಿಸಿದೆ.

Facebook Comments

Sri Raghav

Admin