ಜಿಎಸ್‍ಟಿ ಜಾರಿಯಾಗಿ ಇಂದಿಗೆ ಒಂದು ವರ್ಷ, ಪ್ರಧಾನಿ ಮೋದಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

GST-Modi--01
ನವದೆಹಲಿ, ಜು.1- ಸರಳತೆ ಮತ್ತು ಪಾರದರ್ಶಕತೆಯಿಂದ ಅಭಿವೃದ್ಧಿ ಹೊಂದಲು ಹಾಗೂ ನಾಗರಿಕರು ಪ್ರಾಮಾಣಿಕವಾಗಿ ವ್ಯಾಪಾರ-ವಹಿವಾಟು ನಡೆಸಲು ಜಿಎಸ್‍ಟಿ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಜಿಎಸ್‍ಟಿ ಜಾರಿಗೊಂಡು ಇಂದಿಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಟ್ವಿಟ್ ಮಾಡಿರುವ ಪ್ರಧಾನಿಗಳು, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಲಾಭದತ್ತ ಮುಖ ಮಾಡಲು ಜಿಎಸ್‍ಟಿ ಸಹಕಾರಿಯಾಗಿದೆ ಎಂದಿದ್ದಾರೆ.

ಜಿಎಸ್‍ಟಿ ಜಾರಿ ನಂತರ ದೇಶದಲ್ಲಿದ್ದ ಇನ್ಸ್‍ಪೆಕ್ಟರ್ ರಾಜ್ ಸಂಸ್ಕøತಿ ಅಂತ್ಯಗೊಂಡು ಪ್ರಾಮಾಣಿಕತೆಯ ಉತ್ಸವ ಮೆರೆದಾಡುವಂತಾಗಿದ್ದು, ಇದು ನಾಗರಿಕ ಸ್ನೇಹಿಯಾಗಿದೆ ಎಂದು ಬಣ್ಣಿಸಿದ್ದಾರೆ. ಒಟ್ಟಾರೆ ಜಿಎಸ್‍ಟಿ ಜಾರಿಯಾದ ನಂತರ ದೇಶ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದು, ವ್ಯಾಪಾರ-ವಹಿವಾಟುಗಳು ಸುಗಮವಾಗಿ ನಡೆಯುತ್ತಿವೆ ಎಂದು ಮೋದಿ ಹೇಳಿದ್ದಾರೆ.

ಜಿಎಸ್‍ಟಿ ದಿನಾಚರಣೆ:
ದೇಶದ ತೆರಿಗೆ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ಜಾರಿಗೆ ತರುವ ಉದ್ದೇಶದಿಂದ 2017 ಜುಲೈ 1ರಿಂದ ಜಿಎಸ್‍ಟಿ ಜಾರಿಗೆ ತರಲಾಗಿದೆ. 12ಕ್ಕೂ ಅಧಿಕ ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ಒಂದು ದೇಶ ಒಂದು ತೆರಿಗೆಯಾಗಿ ಪರಿವರ್ತನೆಗೊಂಡಿರುವ ಹಿನ್ನೆಲೆಯಲ್ಲಿ ಜು.1ರಂದು ಜಿಎಸ್‍ಟಿ ದಿನವನ್ನಾಗಿ ಆಚರಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಯಬೇಕಿದೆ:
2017-18ನೆ ಸಾಲಿನಲ್ಲಿ ಜಿಎಸ್‍ಟಿಯಿಂದ 9.40 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಆದರೂ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅದಕ್ಕೆ ಪರಿಹಾರ ಕಂಡುಕೊಂಡರೆ ಉತ್ತಮ ಎಂದು ವಾಣಿಜ್ಯೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‍ಟಿ ಜಾರಿಗೆ ಬಂದು ಒಂದು ವರ್ಷ ಕಳೆದರೂ ಇನ್ನೂ ಕೆಲವರಲ್ಲಿ ಹೊಸ ತೆರಿಗೆ ಪದ್ಧತಿ ಬಗ್ಗೆ ಅರಿವು ಮೂಡಿಲ್ಲ. ನಾಗರಿಕರಲ್ಲಿ ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆ ಜತೆಯಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ.

Facebook Comments

Sri Raghav

Admin