ಸಿಎಂ ಮುಂದೆ ಸಮಸ್ಯೆಗಳನ್ನು ಬಿಚ್ಚಿಟ್ಟ ಪುಟ್ಟ ಪೋರಿ

ಈ ಸುದ್ದಿಯನ್ನು ಶೇರ್ ಮಾಡಿ

CM--0girld

ತುರುವೇಕೆರೆ, ಜು.1- ಅಂಕಲ್ ನಾವು ಓದುತ್ತಾ ಇರೋ ಸ್ಕೂಲ್ ರಸ್ತೆ ತುಂಬಾ ಹಾಳಾಗಿ ಹೋಗಿದೆ. ಮಳೆ ಬಂದರಂತೂ ಯಾರೂ ಓಡಾಡದ ಸ್ಥಿತಿ ಇದೆ. ಪಟ್ಟಣದ ಬಹುತೇಕ ಬಡಾವಣೆಯ ಚರಂಡಿ ನೀರು ಮತ್ತು ಮಳೆ ನೀರು ಈ ರಸ್ತೆಯ ಮೇಲೆ ಹರಿದು ಹೋಗುತ್ತದೆ. ಹೀಗೆ ನೂರಾರು ಸಮಸ್ಯೆಗಳನ್ನು ಮುಖ್ಯಮಂತ್ರಿ ಬಳಿ ಇಟ್ಟಿದ್ದು ಶಾಲಾ ಮುಖ್ಯಮಂತ್ರಿ…!

ಹೌದು. ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆಯ ಶಾಲಾ ಮುಖ್ಯಮಂತ್ರಿ ಟಿ.ಎನ್.ಮುಕ್ತ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮಾಡಿಕೊಂಡ ಪರಿ ಇದು. ರಸ್ತೆಗಳು ಹಾಳಾಗಿ ಮಕ್ಕಳನ್ನು ಕರೆತರಲು ಬರುವ ಪೋಷಕರ ಕಷ್ಟ ಹೇಳತೀರದಾಗಿದ್ದು, ಪಟ್ಟಣದ ಹೊರಪೇಟೆಯ ವಿರಕ್ತಮಠದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದನ್ನು ಮನಗಂಡು ಹಲವಾರು ಬಾರಿ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಮನವಿ ಮಾಡಿಕೊಂಡಿದ್ದರೂ ಸಹ ಪ್ರಯೋಜವಾಗಿರಲಿಲ್ಲ.

ಶಾಲೆಯ ಮುಖ್ಯಮಂತ್ರಿಯಾಗಿದ್ದ ಟಿ.ಎನ್.ಮುಕ್ತಾಳಿಗೆ ಅವಳ ಶಾಲೆಯ ಮಕ್ಕಳು ಮತ್ತು ಕೆಲವು ಪೋಷಕರು ದೂರಿತ್ತಿದ್ದರು. ಮುಖ್ಯಮಂತ್ರಿಗಳೇ ಈ ರಸ್ತೆ ನಿರ್ಮಿಸಿಕೊಡಲು ಸೂಕ್ತವಾದವರು ಎಂದು ಅರಿತ ಮುಕ್ತ ತಮ್ಮ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ಮತ್ತು ಹಿರಿಯ ವಿದ್ಯಾರ್ಥಿ ಟಿ.ಎನ್.ಶ್ರೀರಂಗ ಮತ್ತು ಆಕೆಯ ಪೋಷಕರನ್ನು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಲುವಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಳು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ಮುಕ್ತ ಮತ್ತು ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ಶಾಲೆಯ ರಸ್ತೆಯ ಅವ್ಯವಸ್ಥೆಯನ್ನು ಕುರಿತು ನೇರವಾಗಿ ಮುಖ್ಯಮಂತಿಯವರಿಗೆ ವಿವರಿಸಿದರು. ವಿದ್ಯಾರ್ಥಿನಿ ಮುಕ್ತಳ ಸಾಮಾಜಿಕ ಕಳಕಳಿಗೆ ಖುಷಿಗೊಂಡ ಕುಮಾರಸ್ವಾಮಿಯವರು ಆಕೆಯ ತಲೆಯನ್ನು ನೇವರಿಸುತ್ತಾ ಖಂಡಿತ ನಿನ್ನ ಸಮಸ್ಯೆಯನ್ನು ಈಡೇರಿಸುತ್ತೇನೆ. ಚಿಂತಿಸಬೇಡ ಎಂದು ಹೇಳಿದರು.

ಕೂಡಲೇ ತುಮಕೂರು ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಆಪ್ತ ಕಾರ್ಯದರ್ಶಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು. ಮುಖ್ಯಮಂತ್ರಿಗಳ ಮನೆಯ ಬಳಿಯಿದ್ದ ಹಲವಾರು ಮಂದಿ ಮುಕ್ತಳ ಸಾರ್ವಜನಿಕರ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin