ಸರ್ಕಾರಿ ಕಚೇರಿಗಳಲ್ಲಿಲ್ಲ ಟೈಮ್ ಸೆನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Govt-Office

ಬೆಂಗಳೂರು, ಜು.2- ಕೈ ತುಂಬಾ ಸಂಬಳ, ತುಟ್ಟಿಭತ್ಯೆ, ಕಾರು, ಛೇರ್, ಕಚೇರಿ, ಮನೆ ಎಲ್ಲಾ ಸೌಲಭ್ಯಗಳಿದ್ದರೂ ಕೆಲವು ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದು ವಿರಳ. ಯಾವುದೇ ಸರ್ಕಾರಿ ಕಚೇರಿಗಳಿಗೆ ತೆರಳಿದರೂ ಇದು ಸಾಮಾನ್ಯ. ಆದರೆ ನೌಕರರಿಗೆ ಮಾತ್ರ ಸರ್ಕಾರ ಒಂದು ದಿನವೂ ಕೂಡ ಸಂಬಳ ಕೊಡುವುದನ್ನು ತಡ ಮಾಡುವಂತಿಲ್ಲ.

ಯಾವುದೇ ಸೌಲಭ್ಯಗಳ ಕೊರತೆ ಮಾಡುವಂತಿಲ್ಲ. ಯಾವುದೇ ಸಮಸ್ಯೆಯಾದರೆ ಒಟ್ಟಾಗಿ ಪ್ರತಿಭಟನೆ ನಡೆಯುತ್ತವೆ. ಆದರೆ ಕೆಲಸಗಳ ವಿಳಂಬದಿಂದ ಸಾರ್ವಜನಿಕರಿಗಾಗುವ ತೊಂದರೆಯನ್ನು ಗಮನಿಸುವುದಿಲ್ಲ. ಇದಕ್ಕೆ ಯಾರು ಹೊಣೆ? ಎಲ್ಲರೂ ಹೀಗೇ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ ಬಹುತೇಕರದ್ದು ಉದಾಸೀನ ಮನೋ ಧೋರಣೆ ಇದೆ. ಇದು ಹೋಗಬೇಕು. ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು. ಆಗ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ. ಪ್ರಭುತ್ವಕ್ಕೆ ಹೆಸರು ಬರುತ್ತದೆ. ಬೆಳಗ್ಗೆ 10 ರಿಂದ ಸರ್ಕಾರಿ ಕಚೇರಿಗಳು ಕೆಲಸ ಪ್ರಾರಂಭಿಸ ಬೇಕು. 11 ಗಂಟೆಯಾದರೂ ನೌಕರರು ಕಚೇರಿಗೆ ಬಂದಿರುವುದಿಲ್ಲ.
ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಇಲ್ಲಿ ಸಮಯಕ್ಕೆ ಸರಿಯಾಗಿ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಉಳಿದ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸದ ಕಡೆ ಸಮಯಕ್ಕೆ ಸರಿಯಾಗಿ ಹಾಜರಾ ಗುವುದಿಲ್ಲ. ಬಹುತೇಕ ಕಡೆ ಇದು ಸರ್ವೇ ಸಾಮಾನ್ಯವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ ಎಂದೇ ಭಾವಿಸಲಾಗುತ್ತದೆ. ಆದರೆ ದೇವರ ಕೆಲಸವನ್ನು ಭಯ, ಭಕ್ತಿ, ಶಿಸ್ತಿನಿಂದ ಮಾಡಬೇಕು. ಆದರೆ ಸಮಯಕ್ಕೆ ಸರಿಯಾಗಿ ಯಾರು ಬರುತ್ತಿಲ್ಲ. ಕೆಲವೊಂದು ಕಚೇರಿಗಳಲ್ಲಿ ಸಮಯಕ್ಕೆ ಮುಂಚೆಯೇ ಬಂದು ನೌಕರರು ಕುಳಿತಿರುತ್ತಾರೆ. ಕೆಲವು ಕಚೇರಿಗಳಲ್ಲಿ 12 ಗಂಟೆಯಾದರೂ ನೌಕರರೇ ಬಂದಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಹೇಳುತ್ತಾರೆ. ಬೆಳಗ್ಗೆ ತಡವಾಗಿ ಬರುವುದು, ಸಂಜೆ ಬೇಗ ಹೋಗುವುದೇ ರೂಢಿಯಾಗಿದೆ.
ಕಳೆದ 15 ದಿನಗಳ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸುತ್ತೋಲೆಯೊಂದನ್ನು ಹೊರಡಿಸಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಗಳ ವಿವರ ಮತ್ತು ಸಮಯದ ವಿವರವನ್ನು ನೀಡುವಂತೆ ಇಲಾಖೆ ಮುಖ್ಯಸ್ಥರಿಗೆ ಆದೇಶ ನೀಡಲಾಗಿತ್ತು. ಮತ್ತು ತಡವಾಗಿ ಬಂದು ಬೇಗ ಹೋದವರ ಬಗ್ಗೆ ಪಟ್ಟಿ ಮಾಡಿ ಕ್ರಮ ಕೈಗೊಳ್ಳಲು ಕೂಡ ಮುಂದಾಗಿತ್ತು.

Facebook Comments

Sri Raghav

Admin