ವಂಚಕ ನೀರವ್ ಮೋದಿ ವಿರುದ್ಧ ರೆಡ್‍ಕಾರ್ನರ್ ನೋಟಿಸ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Nirav-Movi neerav--01

ನವದೆಹಲಿ,ಜು.2- ಭಾರತದ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಇಂಟರ್ ಪೋಲ್ ನಿಂದ ರೆಡ್‍ಕಾರ್ನರ್ ನೋಟಿಸ್ ಜಾರಿಯಾಗಿದೆ.   ಇದರಿಂದಾಗಿ ಯಾವುದೇ ಸಂದರ್ಭದಲ್ಲೂ ನೀರವ್ ಮೋದಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
ಕೆಲ ದಿನಗಳಿಂದ ನೀರವ್ ಮೋದಿ ಲಂಡನ್‍ನಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದ. ಈತ ಇಲ್ಲಿ ಇರುವ ಸುಳಿವು ಸಿಗುತ್ತಿದ್ದಂತೆ ಸಿಬಿಐ ಆತನ ಬಂಧನಕ್ಕೆ ಮುಂದಾಗಿತ್ತು.

ಭಾರತದಿಂದ ತಲೆಮರೆಸಿಕೊಂಡಿರುವ ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡಬೇಕೆಂದು ಸಿಬಿಐ ಇಂಟರ್‌ಪೋಲ್‍ಗೆ ಮನವಿ ಮಾಡಿತ್ತು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಇಂಟರ್‌ಪೋಲ್ ಇದೀಗ ರೆಡ್‍ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಆರೋಪಿಯೊಬ್ಬನಿಗೆ ಇಂಟರ್‌ಪೋಲ್ ರೆಡ್‍ಕಾರ್ನರ್ ನೋಟಿಸ್ ಜಾರಿ ಮಾಡಿದರೆ ಆತ ಯಾವುದೇ ದೇಶದಲ್ಲಿ ಆತನನ್ನು ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಈ ರಾಷ್ಟ್ರಗಳು ಇಂಟರ್‌ಪೋಲ್ ವ್ಯಾಪ್ತಿಗೆ ಒಳಪಟ್ಟಿರಬೇಕು. ಈಗಾಗಲೇ ಸಿಬಿಐ ತನಿಖೆ ನಡೆಸಿ ನೀರವ್ ಮೋದಿ, ಆತನ ಸಂಬಂಧಿಕರಾದ ಮೇಗುಲ್ ಚೋಕ್ಸಿ , ಸಹೋದರ ನಿಶಾಲ್ ಸೇರಿದಂತೆ ಮತ್ತಿತರರ ವಿರುದ್ದ ಮುಂಬೈನ ವಿಶೇಷ ನ್ಯಾಯಾಲಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.ಇಂಟರ್‌ಪೋಲ್‍ನಿಂದ ರೆಡ್‍ಕಾರ್ನರ್ ನೋಟಿಸ್ ಜಾರಿಗೆಯಾಗಿರುವ ಕಾರಣ ನೀರವ್ ಮೋದಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಸ್ವತಃ ಭಾರತಕ್ಕೆ ಬಂದು ಶರಣಾಗುವುದು ಇಲ್ಲವೇ ಇಂಟರ್‌ಪೋಲ್ ವ್ಯಾಪ್ತಿಗೆ ಸೇರದ ದೇಶಗಳಲ್ಲಿ ಆಶ್ರಯ ಪಡೆಯಬೇಕು.

ಕೆಲ ದಿನಗಳ ಹಿಂದೆ ಸಿಬಿಐ ಇಂಟರ್‌ಪೋಲ್‍ಗೆ ಮನವಿ ಮಾಡಿಕೊಂಡು ನೀರವ್ ಮೋದಿ ಬಂಧನಕ್ಕೆ ಸಹಕರಿಸುವಂತೆ ಕೋರಿತ್ತು. ಭಾರತದಲ್ಲಿ ಈತ ಎರಡು ಬಿಲಿಯನ್ ಡಾಲರ್ (13 ಸಾವಿರ ಕೋಟಿ) ವಂಚಿಸಿ ಸಾಲ ಹಿಂದುರುಗಿಸದೆ ದೇಶದಿಂದ ತಲೆಮರೆಸಿಕೊಂಡಿದ್ದಾನೆ ಎಂದು ಇಂಟರ್‌ಪೋಲ್‍ಗೆ ಮಾಹಿತಿ ನೀಡಿತ್ತು.

ಬ್ಯಾಂಕ್‍ಗಳಿಗೆ ಸುಳ್ಳು ಮಾಹಿತಿ ನೀಡಿ 13 ಸಾವಿರ ಕೋಟಿ ಸಾಲ ಪಡೆಯಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಈತನ ಆಸ್ತಿಗಳನ್ನು ಸಹ ಮಟ್ಟುಗೋಲು ಹಾಕಿಕೊಳ್ಳಲಾಗಿದೆ. ಈವರೆಗೂ ಸುಮಾರು 6498.20 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು 7080.86 ಕೋಟಿಯಷ್ಟು ಹಣವನ್ನು ವಸೂಲಿ ಮಾಡಬೇಕಾಗಿದೆ. ಇಂಟರ್‌ಪೋಲ್ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳಲ್ಲಿ ನೀರವ್ ಮೋದಿಗೆ ಆಶ್ರಯ ಕೊಡಬಾರದೆಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಕೋರಿತ್ತು.  ಒಂದೆಡೆ ಸಿಬಿಐ, ಇಡಿ ಮತ್ತೊಂದೆಡೆ ವಿದೇಶಾಂಗ ವ್ಯವಹಾರಗಳ ಇಲಾಖೆ ನೀರವ್ ಮೋದಿಯನ್ನು ಬೇಟೆಯಾಡಲು ಸಜ್ಜಾಗಿರುವಂತೆ ಇಂಟರ್‌ಪೋಲ್ ರೆಡ್‍ಕಾರ್ನರ್ ನೋಟಿಸ್ ನೀಡಿರುವುದು ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸಿಕ್ಕ ಜಯ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin