ಸಾಲ ಮನ್ನಾದಿಂದ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಿಗಲ್ಲ : ಶಾಸಕ ಎ.ಟಿ.ರಾಮಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Session--00011

ಬೆಂಗಳೂರು, ಜು.3-ಸಾಲ ಮನ್ನಾ ಮಾಡುವುದರಿಂದ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಅನುಮೋದಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದರಿಂದ ತಾತ್ಕಾಲಿಕ ಪರಿಹಾರ ಸಿಗಲಿದೆ. ಆದರೆ, ಅವರ ಸಂಪೂರ್ಣ ಕಷ್ಟಗಳು ದೂರವಾಗುವುದಿಲ್ಲ. ನೇಣುಗಂಬಕ್ಕೇರುವುದನ್ನು ತಡೆಯಬಹುದು ಅಷ್ಟೇ ಎಂದರು.

ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾಲ ಕೊಡಬೇಕು. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಉತ್ಪಾದನಾ ವಲಯದಲ್ಲಿ ಉತ್ಪಾದಕರೇ ವಸ್ತುವಿನ ಬೆಲೆ ನಿಗದಿಪಡಿಸಿದರೆ ರೈತರ ಉತ್ಪನ್ನಗಳಿಗೆ ಗ್ರಾಹಕರು ಮತ್ತು ಮಧ್ಯವರ್ತಿಗಳು ಬೆಲೆ ನಿಗದಿಪಡಿಸುವ, ಪರಿಸ್ಥಿತಿ ಇದೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿದ್ದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಹೇಳಿದರು.

ಬೆಂಬಲ ಬೆಲೆ ನಿಗದಿ ಪಡಿಸುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳೇ ಇಲ್ಲ. ಬೆಲೆಗಳು ಕುಸಿತವಾದಾಗ ಮಾರುಕಟ್ಟೆ ಮಧ್ಯಪ್ರವೇಶವೂ ಸರಿಯಾಗಿ ಆಗುತ್ತಿಲ್ಲ. ಇಡೀ ದೇಶದಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿದೆ ಎಂದರು. ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಸಾಲ ಮನ್ನಾ ಮಾಡುವ ಬಗ್ಗೆ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.

ಸ್ಥಳೀಯವಾಗಿ ಕೈಗಾರಿಕೆ ಅಭಿವೃದ್ಧಿಪಡಿಸಿದರೆ ನಗರ ಪ್ರದೇಶಗಳ ವಲಸೆ ತಗ್ಗಿಸಬಹುದು. ನದಿ ಮೂಲಗಳ ನೀರನ್ನು ಕುಡಿಯಲು ಬಳಸುವಂತೆ ಯೋಜನೆ ರೂಪಿಸಬೇಕೆಂದು ಹೇಳಿದರು.  ಶಿಕ್ಷಣ ಮತ್ತು ಆರೋಗ್ಯ ಸೇವೆಗಳೆರಡೂ ಸಾಮಾನ್ಯ ಜನರ ಕೈಗೆಟುಕುತ್ತಿಲ್ಲ ಎಂದ ಅವರು, ದೇಶದ ಜಿಡಿಪಿ ಕೊಡುಗೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಶೇ.60ರಷ್ಟು ಕೃಷಿ ಅವಲಂಬಿತವಾಗಿದ್ದರೂ ಜಿಡಿಪಿಗೆ ಶೇ.19ರಷ್ಟು ಮಾತ್ರ ಕೊಡುಗೆ ನೀಡಲಾಗುತ್ತದೆ ಎಂದರು.

ರಾಜ್ಯಪಾಲರ ಭಾಷಣ ಜೈ ಜವಾನ್ ಜೈ ಕಿಸಾನ್ ಘೋಷಣೆಯಂತಿದ್ದು, ರೈತರ ಕಲ್ಯಾಣ ಕಾರ್ಯಕ್ರಮವಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆಯ ಪ್ರಸ್ತಾಪವಿದೆ. ನಗರ, ಹಳ್ಳಿಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದು, ರಾಜ್ಯಾದ್ಯಂತ ಕೆರೆ ತುಂಬಿಸುವ ಯೋಜನೆ ವಿಸ್ತರಿಸುವುದು ಸೇರಿದಂತೆ ಹಲವು ಪ್ರಮುಖ ಅಂಶಗಳು ಪ್ರಸ್ತಾಪವಾಗಿವೆ ಎಂದರು. ಒಂದು ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನುಗಳು ಹಾಗೂ ಪುರಸ್ಕøತ ಯೋಜನೆಗಳು ಸಾಕಷ್ಟಿದ್ದು, ಜಂಟಿಯಾಗಿ ಅನುಷ್ಠಾನಗೊಳಿಸುತ್ತಿರುವುದು ವಾಡಿಕೆಯಲ್ಲಿದೆ ಎಂದು ಹೇಳಿದರು.

Facebook Comments

Sri Raghav

Admin