ಆರ್’ಟಿಇ ಪ್ರವೇಶ : ಪಿನ್‍ಕೋಡ್ ಆಧಾರದ ಮೇಲೆ ಭೌಗೋಳಿಕ ಪ್ರದೇಶ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait

ಬೆಂಗಳೂರು, ಜು.3-ಆರ್’ಟಿಇ ಕಾಯ್ದೆಯಡಿ ಪ್ರವೇಶ ಪಡೆಯಲು ನಿಯಮಗಳನ್ನು ಸರಳೀಕರಿಸ ಲಾಗಿದ್ದು, ಅಂಚೆ ಕಚೇರಿಯ ಪಿನ್‍ಕೋಡ್ ಆಧಾರದ ಮೇಲೆ ಭೌಗೋಳಿಕ ಪ್ರದೇಶವನ್ನು ನಿಗದಿ ಮಾಡಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ,ಶಾಸಕರಾದ ಜೆ.ಸಿ.ಮಾಧುಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ವಿಷಯ ಕುರಿತು ಮಾತನಾಡಿದ ಅವರು, ಈ ಮೊದಲು ನಗರಪ್ರದೇಶದಲ್ಲಿ ವಾರ್ಡ್‍ವಾರು, ಗ್ರಾಮೀಣ ಭಾಗದಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಅದನ್ನು ಸರಳೀಕರಣ ಮಾಡಿ ಪಿನ್‍ಕೋಡ್ ಆಧಾರಿತವಾಗಿ ಭೌಗೋಳಿಕ ವ್ಯಾಪ್ತಿಯನ್ನು ನಿಗದಿ ಮಾಡಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಎರಡು ಮೂರು ವಾರ್ಡ್‍ಗಳು ಸೇರುತ್ತವೆ. ಗ್ರಾಮೀಣ ಭಾಗದಲ್ಲಿ ತಾಲೂಕು ಪಂಚಾಯ್ತಿಗೆ ಒಳಪಡುತ್ತಿದೆ.

ಶಿಕ್ಷಕ ವೃತ್ತಿಗೆ ಸೇರುವವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲೇಬೇಕೆಂಬ ನಿಯಮ ರೂಪಿಸಲಾಗಿದೆ. 10 ವರ್ಷ ನಗರ ಪ್ರದೇಶದಲ್ಲಿ ಕೆಲಸ ಮಾಡಿದವರನ್ನು ವರ್ಗಾವಣೆ ಮಾಡಲು ಕಾಯ್ದೆಗೆ ಹಿಂದಿನ ಸರ್ಕಾರದಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗಿನ ಸರ್ಕಾರ ಅದನ್ನು ಜಾರಿಗೆ ತರಬೇಕು. ಶಿಕ್ಷಣ ಸಚಿವ ಎನ್.ಮಹೇಶ್ ಅವರು ಇಲಾಖೆ ಬಗ್ಗೆ ಆಳವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸುಧಾರಣಾ ಕ್ರಮಗಳು ಜಾರಿಯಾಗುತ್ತವೆ. ನಾನೂ ಕೂಡ ಅವರ ಜೊತೆ ಸಹಕಾರ ನೀಡುತ್ತೇನೆ ಎಂದರು.  ತನ್ವೀರ್ ಸೇಠ್ ಶಿಕ್ಷಣ ಇಲಾಖೆ ಬಗ್ಗೆ ಹೇಳಿಕೆ ನೀಡುವಾಗ ಶಿಕ್ಷಣ ಸಚಿವ ಮಹೇಶ್ ಅವರು ಆಸಕ್ತಿಯಿಂದ ಎಲ್ಲವನ್ನು ಕೇಳುತ್ತಾ ಕುಳಿತಿದ್ದರು.

Facebook Comments

Sri Raghav

Admin