ಹೊಸ ತಾಲ್ಲೂಕುಗಳಿಗೆ ಅಗತ್ಯ ಸಿಬ್ಬಂದಿ, ಮೂಲಸೌಲಭ್ಯ ಕೊಡಿ : ಶಾಸಕ ಬಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

BC-Patil--01

ಬೆಂಗಳೂರು, ಜು.4- ಹೊಸ ತಾಲ್ಲೂಕುಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಒದಗಿಸಿ ಕಾರ್ಯಾರಂಭ ಮಾಡಬೇಕೆಂದು ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಶಾಸಕ ಬಿ.ಸಿ.ಪಾಟೀಲ್ ಒತ್ತಾಯಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಮಾತನಾಡಿದ ಅವರು, ಹೊಸ ತಾಲ್ಲೂಕುಗಳು ರಚನೆಯಾಗಿದ್ದರೂ ಕೆಲವೆಡೆ ತಹಸೀಲ್ದಾರ್ ಬಿಟ್ಟರೆ ಇತರೆ ಹುದ್ದೆಗಳು ಮಂಜೂರಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲದೆ ತಾಲ್ಲೂಕು ಕಚೇರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪೂರ್ಣ ಪ್ರಮಾಣದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಹೊಸ ತಾಲ್ಲೂಕುಗಳು ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದರು.

ಕಾನ್‍ಸ್ಟೇಬಲ್‍ನಿಂದ ಎಸ್‍ಐವರೆಗೆ ಅವರ ಸ್ವಂತ ತಾಲ್ಲೂಕು ಹೊರತು ಪಡಿಸಿ ಬೇರೆ ತಾಲ್ಲೂಕುಗಳಿಗೆ ವರ್ಗಾವಣೆ ಮಾಡಬೇಕು. ಅದೇ ರೀತಿ ಸಬ್‍ಇನ್ಸ್‍ಪೆಕ್ಟರ್‍ಗಳನ್ನು ಕೂಡ ಸ್ವಂತ ಜಿಲ್ಲೆ ಹೊರತು ಪಡಿಸಿ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿದರೆ ಒಳ್ಳೆ ರೀತಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಇಲ್ಲವಾದರೆ ಪೊಲೀಸ್ ಸಿಬ್ಬಂದಿ ವಾರೆಂಟ್ ನೀಡುವುದಾಗಲಿ, ರೈಡ್ ಮಾಡುವುದಾಗಲಿ ಕಷ್ಟವಾಗುತ್ತದೆ. ಜಿಲ್ಲಾ ಎಸ್‍ಪಿಗಳಿಗೂ ಕೂಡ ಪೊಲೀಸರ ಮೇಲೆ ನಿಯಂತ್ರ ಸಾಧಿಸುವುದು ಕಷ್ಟ. ಏಕೆಂದರೆ ತಮ್ಮ ತಾಲ್ಲೂಕಿನ ಸಚಿವರು ಹಾಗೂ ಜಿಲ್ಲೆಯ ಸಚಿವರಿಂದ ಶಿಫಾರಸು ಮಾಡಿಸುತಾರೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಪ್ರಮಾಣ ನಿಯಂತ್ರಿಸಲು ಪ್ರತಿ 100 ಕಿ.ಮೀ.ಗೊಂದು ನಿಯಂತ್ರಣ ಕೊಠಡಿ ತೆರೆದು ಪೊಲೀಸ್ ಪ್ಯಾಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದ ಚಹ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ ವಿಸ್ಕಿ, ಬ್ರಾಂದಿಯಂತಹ ಮದ್ಯಗಳು ಮಾರಾಟವಾಗುತ್ತಿದ್ದು, ಯುವ ಸಮುದಾಯ ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ತಾಲ್ಲೂಕಿನ ಗ್ರಾಮವೊಂದರಲ್ಲಿ 20 ಮಂದಿ ಯುವಕರು ಕುಡಿತಕ್ಕೆ ದಾಸರಾಗಿದ್ದು, ಅವರಿಗೆ ಯಾರೂ ಕೂಡ ಹೆಣ್ಣು ಕೊಡಲು ಮುಂದಾಗುತ್ತಿಲ್ಲ. ಇದರ ಗಂಭೀರತೆಯನ್ನು ಅರಿತು ಸರ್ಕಾರ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ನೇಮಕಗೊಂಡ 134 ಕಾಲೇಜು ಉಪನ್ಯಾಸಕರ ಪೈಕಿ 24 ಮಂದಿ ದಕ್ಷಿಣ ಕರ್ನಾಟಕಕ್ಕೆ ನಿಯೋಜನೆ ಮೇಲೆ ಬಂದಿದ್ದಾರೆ. ಹೀಗಾದರೆ ಆ ಭಾಗದ ಅಭಿವೃದ್ಧಿ ಹೇಗೆ ಸಾಧ್ಯ? ನೇಮಕಗೊಂಡವರನ್ನು ಆಯಾ ಸ್ಥಳಗಳಲ್ಲೇ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸಬೇಕು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಪ್ಪಿಸಲು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಮಕ್ಕಳೆಲ್ಲಾ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಸರ್ಕಾರಿ ಶಾಲೆಗಳು ಮಕ್ಕಳ ಹಾಜರಾತಿಯ ಕೊರತೆಯನ್ನು ಎದುರಿಸಿ ಮುಚ್ಚುವ ಸ್ಥಿತಿಗೆ ತಲುಪುತ್ತವೆ ಎಂದು ಸದನದ ಗಮನ ಸೆಳೆದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಈಗ ಪವಿತ್ರವಾಗಿದೆ :
ಬೆಂಗಳೂರು, ಜು.4- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಈಗ ಪವಿತ್ರವಾಗಿದೆ ಎಂದು ಆಡಳಿತ ಪಕ್ಷದ ಶಾಸಕ ಬಿ.ಸಿ.ಪಾಟೀಲ್ ವಿಧಾನಸಭೆಗೆ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಮಾತನಾಡಿದ ಅವರು, ಜಾತ್ಯಾತೀತ ನಿಲುವಿನ ಪಕ್ಷಗಳೆರಡು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. ಈ ಹಿಂದೆ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಮಾಡಿದ್ದವು. ಆಗ ಅಪವಿತ್ರವಾಗಿತ್ತು ಎಂಬುದು ನನ್ನ ಭಾವನೆ. ಆದರೂ ಪದೇ ಪದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಪವಿತ್ರವೆಂದು ಬಿಜೆಪಿಯವರು ಟೀಕಿಸುವುದು ಸರಿಯಲ್ಲ ಎಂದರು.

Facebook Comments

Sri Raghav

Admin